

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಎಳೆಯ ಕಲಾವಿದರೆ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಸಮರ್ಥರು ಹಾಗೂ ಪ್ರಬುದ್ಧರು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಗುರುವಾರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣಪರ್ವ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಹಿರಿಯ ಕಲಾವಿದರ ಕೊರತೆ ಕಾಡುತ್ತಿರುವಾಗ ಎಳೆಯ ಮಕ್ಕಳು ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸಲು ಸಾಧ್ಯ. ಶಾಲಾ-ಕಾಲೇಜುಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಮೇಳದ ಯಕ್ಷಗಾನ ಪ್ರದರ್ಶನ ಆಯೋಜಿಸಿ ಬಾಲಕಲಾವಿದರನ್ನು ಪ್ರೋತ್ಸಾಹಿಸಬೇಕು. 1975ರ ಅ.10ರಂದು ಸಾಲಿಗ್ರಾಮದಲ್ಲಿ ದಿ.ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಎಚ್.ಶ್ರೀಧರ ಹಂದೆ ಅವರ ನೇತೃತ್ವದಲ್ಲಿ ಪ್ರಾರಂಭಿಸಿದ ಮಕ್ಕಳ ಮೇಳ ಸುವರ್ಣಮಹೋತ್ಸವ ಆಚರಿಸುತ್ತಿರುವುದು ತುಂಬಾ ಸಂತೋಷವಾಗಿದೆ. ಹಲವು ಬಾರಿ ಎಳೆಯ ಕಲಾವಿದರನ್ನು ಧರ್ಮಸ್ಥಳಕ್ಕೆ ಆಹ್ವಾನಿಸಿ ಯಕ್ಷಗಾನ ವೀಕ್ಷಿಸಿ ತಾನು ಹಾಗೂ ಕುಟುಂಬದವರು ಸಂತೋಷಪಟ್ಟಿದ್ದೇವೆ ಎಂದರು.
ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಮಾತನಾಡಿದರು. ಜನಾರ್ದನ ಹಂದೆ, ಡಿ.ಸುರೇಂದ್ರ ಕುಮಾರ್ ಮತ್ತು ಡಿ.ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಎಳೆಯ ಕಲಾವಿದರಿಂದ ಹೂವಿನ ಕೋಲು ಪ್ರದರ್ಶನ ನಡೆಯಿತು.
2025ರ ಅ.10ರ ವರೆಗೆ ರಾಜ್ಯದೆಲ್ಲೆಡೆ ಯಕ್ಷಗಾನ ಪ್ರದರ್ಶನ, ವಿಚಾರ ಸಂಕಿರಣ, ಕಮ್ಮಟ, ತಾಳಮದ್ದಳೆ, ಶಾಲಾ-ಕಾಲೇಜುಗಳಲ್ಲಿ ಪ್ರಾತ್ಯಕ್ಷಿಕೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಕ್ಕಳ ಮೇಳದ ನಿರ್ದೇಶಕ ಎಚ್.ಸುಜಯೀಂದ್ರ ಹಂದೆ ಪ್ರಕಟಿಸಿದರು.
ರಾಘವೇಂದ್ರ ನಾಯರ್ ಸ್ವಾಗತಿಸಿದರು. ಮಕ್ಕಳ ಮೇಳ ಟ್ರಸ್ಟ್ ಕಾರ್ಯಾಧ್ಯಕ್ಷ ಕೆ.ಮಹೇಶ್ ಉಡುಪ ವಂದಿಸಿದರು. ಮಕ್ಕಳ ಮೇಳದ ನಿರ್ದೇಶಕ ಎಚ್.ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರ್ವಹಿಸಿದರು.
1975ರ ಅಕ್ಟೋಬರ್ 10ರಂದು ದಿ.ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಎಚ್.ಶ್ರೀಧರ ಹಂದೆ ಮಕ್ಕಳ ಮೇಳ ಪ್ರಾರಂಭಿಸಿದರು. ಅಮೆರಿಕ, ಅಟ್ಲಾಂಟ, ನ್ಯೂಯಾರ್ಕ್, ವಾಷಿಂಗ್ಟನ್, ಬೆಹರಿನ್, ಇಂಗ್ಲಂಡ್ ಮೊದಲಾದ ಕಡೆಗಳಲ್ಲಿ ಮಕ್ಕಳ ಮೇಳದ ಕಲಾವಿದರಿಂದ ಯಕ್ಷಗಾನ ಪ್ರದರ್ಶನಗೊಂಡಿದೆ. ಇನ್ನು ಒಂದು ವರ್ಷ ರಾಜ್ಯದೆಲ್ಲೆಡೆ ಯಕ್ಷಗಾನ ಪ್ರದರ್ಶನ, ಶಾಲಾ-ಕಾಲೇಜುಗಳಲ್ಲಿ ವಿಚಾರ ಸಂಕಿರಣ, ಕಮ್ಮಟ, ಪ್ರಾತ್ಯಕ್ಷಿಕೆ, ತಾಳಮದ್ದಳೆ, ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಯಕ್ಷಗಾನ ಎಂಬ ಆರಾಧನಾ ಜಾನಪದ ಕಲೆಗೆ ಒಂದು ಸಾವಿರ ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆ ಇದೆ. ಪರಿವರ್ತನೆ ಜಗತ್ತಿನ ನಿಯಮ. ಆದರೆ ಪರಿವರ್ತನೆಯ ಹೆಸರಿನಲ್ಲಿ ಕಲೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗಬಾರದು. ಯಕ್ಷಗಾನದ ಮೂಲಸ್ವರೂಪ, ವೇಷಭೂಷಣ, ಸಂಪ್ರದಾಯ, ಪೌರಾಣಿಕ ಪ್ರಸಂಗಗಳ ಪ್ರದರ್ಶನ ಮೊದಲಾದ ಕ್ರಮಗಳಿಂದ ಧರ್ಮಸ್ಥಳ ಮೇಳವು ಇತರ ಎಲ್ಲ ಮೇಳಗಳಿಗೂ ಆದರ್ಶ ಹಾಗೂ ಅನುಕರಣೀಯವಾಗಿದೆ. ಅಶೋಕ ಭಟ್, ಹವ್ಯಾಸಿ ಕಲಾವಿದ