

ಮೈಸೂರು: ನಾಡಿನ ಪ್ರಸಿದ್ಧ ಶ್ರದ್ಧೆ ಹಾಗೂ ಭಕ್ತಿಯ ಧಾರ್ಮಿಕ ಕೇಂದ್ರಗಳಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರವೂ ಒಂದು. ಇಂದು ಕ್ಷೇತ್ರವನ್ನು ವಿವಾದಿತ ಕೇಂದ್ರವನ್ನಾಗಿಸಲು ಕೆಲವರು ಯತ್ನಿಸುತ್ತಿರುವುದು ವಿಷಾದನೀಯ ಎಂದು ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.
ನಂಬಿಕೆ ಎಂಬುದು ಬಹು ಸೂಕ್ಷ್ಮವಾದ ಸಂಗತಿ. ಅದು ಕನ್ನಡಿಯಿದ್ದಂತೆ. ಒಮ್ಮೆ ಅದು ಒಡೆದು ಹೋದರೆ ಮತ್ತೆ ಸರಿಪಡಿಸಲಾಗು ವುದಿಲ್ಲ. ಒಡೆದ ಕನ್ನಡಿಯ ಪ್ರತಿಚೂರಿನಲ್ಲೂ ಪ್ರತ್ಯೇಕ ಪ್ರತ್ಯೇಕ ಬಿಂಬಗಳು ಕಾಣುತ್ತಿರುತ್ತವೆ. ಹೀಗೆ ಕಂಡ ಕಂಡ ಬಿಂಬಗಳನ್ನೆಲ್ಲ ನಂಬಿ ವಿಭಿನ್ನವಾಗಿ ಅರ್ಥೈಸುತ್ತಾ ಹೋಗುವುದು ಸೂಕ್ತವಾದುದಲ್ಲ. ಒಂದು ಧಾರ್ಮಿಕ ಕ್ಷೇತ್ರದ ಮೇಲೆ ನಿರಂತರವಾಗಿ ಒಂದಲ್ಲ ಒಂದು ವಿವಾದವನ್ನು ಮುನ್ನೆಲೆಗೆ ತರುತ್ತಿರುವ ಪ್ರಯತ್ನಗಳು ಸೂಕ್ತವಾದುವಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶ್ರೀ ಧರ್ಮಸ್ಥಳ ಕ್ಷೇತ್ರ ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತದ, ಜಗತ್ತಿನ ಅನೇಕ ಭಾಗಗಳ ಪರಂಪರಾಗತ ಸಹಬಾಳ್ವೆಗೆ ಧೊ್ಯೀೀತಕ, ಅಲ್ಲಿ ಶಿವ ದೇವಾಲಯದಲ್ಲಿ ಪೂಜಿಸುವ ಆರ್ಚಕರು ವಿಷ್ಣುವನ್ನೇ ಪರಮ ದೈವವೆಂದು ನಂಬುವ ಮಾಧ್ವ ಸಂಪ್ರದಾಯದವರು. ಉಸ್ತುವಾರಿ ನೋಡಿಕೊಳ್ಳುತ್ತಿರುವವರು ಶ್ರಮಣ ಧರ್ಮದ ಜೈನ ಸಮುದಾಯದವರು. ಈ ಮೂರು ವಿಭಿನ್ನ ನಂಬಿಕೆಗಳು ಒಗ್ಗೂಡಿರುವ ಶ್ರೀ ಕ್ಷೇತ್ರದ ಮೂಲ ದೈವಕ್ಕೆ ಹೆಗ್ಗಡೆ ಕುಟುಂಬದ ಪರಂಪರೆಯವರೆಲ್ಲರೂ ಶ್ರದ್ಧಾ-ಭಕ್ತಿಗಳಿಂದ ನಡೆದುಕೊಳ್ಳುತ್ತಿರುವುದು ಹಾಗೂ ಯಾವುದೇ ಚ್ಯುತಿಬಾರದಂತೆ ನಿರ್ವಹಿಸುತ್ತಿರುವುದು ಹೆಮ್ಮೆ ಪಡುವ ವಿಚಾರ. ಇದು ಭಾವೈಕ್ಯತೆಗೆ ನಿಜವಾದ ತೋರುಗನ್ನಡಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ. ವೀರೇಂದ್ರ ಹೆಗ್ಗಡೆ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಜನರ ಬದುಕನ್ನು ಸಮೃದ್ಧಗೊಳಿಸಲು ಹಮ್ಮಿಕೊಂಡಿರುವ ಕಾರ್ಯಗಳು ಅಪೂರ್ವವಾದುವು. ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿರುವರು. ದೇವಾಲಯಗಳ ಜೀಣೋದ್ಧಾರ ಕೈಗೊಳ್ಳುತ್ತಿರುವರು. ಮಂಜೂಷಾ ವಸ್ತುಸಂಗ್ರಹಾಲಯದ ಮೂಲಕ ಪ್ರಾಚೀನ ವಸ್ತುಗಳು, ಸ್ಮರಣಿಕೆಗಳು ಹಾಗೂ ಹಸ್ತಪ್ರತಿಗಳ ಸಂಗ್ರಹ ಮತ್ತು ಪ್ರದರ್ಶನ ವ್ಯವಸ್ಥೆ ಮಾಡಿರುವರು. ಸ್ತ್ರೀಶಕ್ತಿ ಸಂಘಗಳ ಮೂಲಕ ಗ್ರಾಮೀಣ ಮಹಿಳೆಯರ ಆರ್ಥಿಕ ಭದ್ರತೆಯನ್ನು ಹೆಚ್ಚಿಸಿ ಸ್ವಾಭಿಮಾನ ಮತ್ತು ಸ್ವಾವಲಂಬಿ ಬದುಕನ್ನು ಕಲ್ಪಿಸುತ್ತಿರುವರು. 1972ರಿಂದಲೂ ಸಾಮೂಹಿಕ ವಿವಾಹಗಳನ್ನು ನಡೆಸುವ ಮೂಲಕ ಶ್ರೀ ಸಾಮಾನ್ಯರು ಆಡಂಬರದ ಆಚರಣೆಗಳಿಂದ ಅನುಭವಿಸುತ್ತಿದ್ದ ಆರ್ಥಿಕ ತೊಂದರೆಯಿಂದ ಮುಕ್ತರನ್ನಾಗಿರಿಸಿರುವುದು ಅನುಕರಣೀಯ ಎಂದು ಹೇಳಿದ್ದಾರೆ.
ಇಂತಹ ಪವಿತ್ರ ಕ್ಷೇತ್ರದ ಪರಿಸರದಲ್ಲಿ ನಡೆದ ಕೆಲವು ಅಸಹಜ ಸಾವಿನ ಪ್ರಕರಣಗಳು ಗಂಭೀರವಾದುವೇ ಆಗಿರಬಹುದು. ಆದರೆ ಇಂತಹ ಪ್ರಕರಣಗಳನ್ನು ಶ್ರೀ ಕ್ಷೇತ್ರದೊಂದಿಗೆ ತಳಕು ಹಾಕಲು ಪ್ರಯತ್ನಿಸುವುದು ದುಡುಕಿನ ನಿರ್ಧಾರವಾಗುತ್ತದೆ. ಸತ್ಯ ಸದಾ ಮೌನಿ, ಸುಳ್ಳಿಗೆ ಆರ್ಭಟ ಜಾಸ್ತಿ.ಇದರಿಂದ ಶ್ರದ್ಧಾವಂತ ಮನಸ್ಸುಗಳಿಗೆ ಧಕ್ಕೆಯುಂಟಾಗಬಾರದು ಎಂದು ತಿಳಿಸಿದ್ದಾರೆ.
ಇಂಥ ಕೃತ್ಯಗಳನ್ನು ಸಮಗ್ರವಾಗಿ ತನಿಖೆ ಮಾಡಿ ಸತ್ಯವನ್ನು ಅನಾವರಣ ಮಾಡಬೇಕಾದುದು ಸರ್ಕಾರದ ಜವಾಬ್ದಾರಿಯಾಗಿದ್ದು, ಅದಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಶ್ರೀ ಕ್ಷೇತ್ರದ ಬಗ್ಗೆ ಅಪಾರ ಭಕ್ತಿ ಮತ್ತು ಶ್ರದ್ಧೆಯನ್ನು ಹೊಂದಿರುವ ಸದ್ಭಕ್ತರು ಶಾಂತಿ ಮತ್ತು ಸಂಯಮದಿಂದ ಇರಬೇಕಾದುದು ಅಗತ್ಯ. ಹಾಗೆಯೇ ನ್ಯಾಯಕ್ಕಾಗಿ ಆಗ್ರಹಿಸುವವರು ಕೂಡ ಯಾವುದೇ ಪೂರ್ವಾಗ್ರಹಗಳಿಗೆ ಒಳಗಾಗದೆ ತನಿಖೆ ಪೂರ್ಣವಾಗುವವರೆಗೆ ಅಸಹನೆಗೊಳ್ಳದೆ ತಾಳ್ಮೆಯಿಂದ ಇರಬೇಕಾದುದೂ ಅಗತ್ಯ. ಯಾವುದನ್ನೇ ಆಗಲಿ ಒಡೆಯುವುದು ಸುಲಭ, ಕಟ್ಟುವುದು ಕಷ್ಟ ಎಂಬುದನ್ನು ಎಲ್ಲರೂ ಅರಿಯಬೇಕು. ಸರ್ಕಾರ ಆದಷ್ಟು ಶೀಘ್ರವಾಗಿ ಕೂಲಂಕುಷವಾಗಿ ತನಿಖೆ ನಡೆಸಿ ಸತ್ಯವನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದ್ದಾರೆ.
ಅನೇಕ ಭಕ್ತರಿಗೆ ಇಂತಹ ಪ್ರಸಂಗಗಳು ಏಕೆ ಎದುರಾಗುತ್ತವೆ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡವುದು ಸಹಜ. ಇದೆಲ್ಲ ಭಗವಂತನ ಲೀಲೆ ಎಂದು ತಿಳಿಯುವುದು ಸೂಕ್ತ. ‘ತೇನ ವಿನಾತೃಣಮಪಿ ನಚಲತಿ’ ಎಂಬಂತೆ ಭಗವಂತನ ಲೀಲೆಯಲ್ಲದಿದ್ದರೆ ಇಂಥದ್ದೆಲ್ಲ ಸಂಭವಿಸುವುದಿಲ್ಲ. ಸತ್ಯ ತನ್ನ ಪ್ರಖರತೆಯನ್ನು ಕಂಡು ಕೊಳ್ಳಲು ಇದೂ ಸಹ ಒಂದು ಸಾಧನವಾಗಿರಲೂ ಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇವರ ದಾಸಿಮಯ್ಯನವರು ‘ಹರತನ್ನ ಭಕ್ತರತಿರಿವಂತೆ ಮಾಡುವ ಒರೆದು ನೋಡುವ ಮಿಸುನಿಯಚಿನ್ನದಂತೆ ಅರೆದು ನೋಡುವಚಂದನದಂತೆ ಅರಿದು ನೋಡುವಕಬ್ಬಿನ ಕೋಲಿನಂತೆ ಬೆದರದೆ ಬೆಚ್ಚದೆಇರ್ದಡೆ ಕರವಿಡಿದೆತ್ತಿಕೊಂಬ, ನಮ್ಮ ರಾಮನಾಥ’ ಎಂದು ಹೇಳಿರುವಂತೆ ಭಗವಂತನೇ ಆಡುತ್ತಿರಬಹುದಾದ ಈ ಲೀಲಾ ಪ್ರಸಂಗದಿಂದ ಚಿನ್ನವು ತನ್ನ ನೈಜಕಾಂತಿಯನ್ನು ಮತ್ತೆ ಹೊಂದುವುದರಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲಿಯವರೆಗೆ ಎಲ್ಲರೂ ತಾಳ್ಮೆಯಿಂದಿರಿ ಬೇಕಾದುದು ಅಗತ್ಯ ಎಂದು ಹೇಳಿದ್ದಾರೆ.
ಇಂಥ ಘಟನೆಗಳಿಂದ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಅವರ ಕುಟುಂಬವರ್ಗದವರು, ಶ್ರೀ ಕ್ಷೇತ್ರದ ಸೇವಾಕರ್ತರು, ಭಕ್ತಾದಿಗಳು ಹಾಗೂ ಅಭಿಮಾನಿಗಳು ವಿಚಲಿತರಾಗದೆ, ಧೈರ್ಯ ಹಾಗೂ ಸಮಾಧಾನಗಳಿಂದಿದ್ದು, ಶ್ರೀ ಕ್ಷೇತ್ರದ ಎಲ್ಲ ಧಾರ್ಮಿಕ ಚಟುವಟಿಕೆಗಳನ್ನು ಎಂದಿನಂತೆ ಮುಂದುವರಿಸಿಕೊಂಡು ಹೋಗುತ್ತಿರಬೇಕು. ಇಂಥ ಸೂಕ್ಷ್ಮ ಸಂದರ್ಭಗಳಲ್ಲಿ ಎಲ್ಲರೂ ಅವರೊಂದಿಗೆ ಒಟ್ಟಾಗಿದ್ದು ಕ್ಷೇತ್ರದ ಸಂರಕ್ಷಣೆಗೆ ಸಹಕರಿಸಬೇಕಾದುದು ಅತ್ಯಗತ್ಯ. ಶ್ರೀ ಮಂಜುನಾಥ ಸ್ವಾಮಿಯ ಕೃಪೆಯಿಂದ ಆದಷ್ಟು ಬೇಗ ಎಲ್ಲ ಕಾರ್ಮೋಡಗಳು ಕರಗಿ ಶಾಂತಿ-ನೆಮ್ಮದಿಗಳು ನೆಲೆಸುವಂತಾಗಲೆಂದು ಹಾರೈಸುತ್ತೇವೆ ಎಂದು ತಿಳಿಸಿದ್ದಾರೆ.