

ಮೈಸೂರು: ಸಾಹಿತಿ ಡಾ.ಕಮಲಾ ಹಂಪನಾ ನಿಧನಕ್ಕೆ ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ ನಾಡಿನ ಶ್ರೇಷ್ಠ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿದ್ದ ಡಾ. ಕಮಲಾ ಹಂಪನಾ ಅವರ ಅಗಲುವಿಕೆ ಸಾಹಿತ್ಯಲೋಕಕ್ಕೆ ಆಘಾತವನ್ನುಂಟುಮಾಡಿದೆ. ರಾಜ್ಯದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದ ಕಮಲಾ ಹಂಪನಾ ಅವರು ಮೂರು ದಶಕಗಳಿಗೂ ಮಿಕ್ಕು ಅಧ್ಯಾಪನ, ಸಂಶೋಧನಗಳಲ್ಲಿ ಕ್ರಿಯಾಶೀಲರಾಗಿದ್ದರು. ಮಹಿಳಾ ಸಂವೇದನೆಯ ಆರಂಭಿಕ ಬರಹಗಾರರಲ್ಲಿ ಅವರೂ ಒಬ್ಬರು. ಸಮನ್ವಯ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದ ಅವರು ಭಾರತೀಯ ಮೌಲ್ಯಗಳ ಆರಾಧಕರಾಗಿದ್ದರು ಎಂದು ಶೋಕ ಸಂದೇಶದಲ್ಲಿ ಶ್ರೀಗಳು ತಿಳಿಸಿದ್ದಾರೆ.
ನಿವೃತ್ತಿಯ ಬಳಿಕ ಮೈಸೂರು ವಿಶ್ವವಿದ್ಯಾನಿಲಯದ ಜೈನಶಾಸ್ತ್ರ ಮತ್ತು ಪ್ರಾಕೃತ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿಯೂ ಕಾರ್ಯ ನಿರ್ವಹಿಸಿದ್ದರು. ಜೈನ ಸಾಹಿತ್ಯ ಅವರ ವಿಶೇಷ ಅಧ್ಯಯನದ ವಿಷಯವಾಗಿತ್ತು. ಖ್ಯಾತ ಹಿರಿಯ ವಿದ್ವಾಂಸ ಡಾ.ಹಂಪ ನಾಗರಾಜಯ್ಯ ಅವರ ಧರ್ಮಪತ್ನಿಯಾಗಿದ್ದ ಅವರು ಮುಕ್ತ ವಿಚಾರವಾದಿಯಾಗಿದ್ದರು. ಕಮಲಾ ಹಂಪನಾ ಮೂಡಬಿದರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪುರಸ್ಕಾರಗಳಿಗೆ ಭಾಜನರಾಗಿದ್ದರು ಎಂದು ತಿಳಿಸಿದ್ದಾರೆ.
ಡಾ. ಕಮಲಾ ಹಂಪನಾ ಬಹುಶ್ರುತ ವಿದ್ವಾಂಸರಾಗಿದ್ದರು. ನಡೆ-ನುಡಿಗಳಲ್ಲಿ ಸರಳರು, ವಿನಯಶಾಲಿಗಳು, ಗುಣಸಂಪನ್ನರು, ಒಳ್ಳೆಯ ಸದ್ಗಹಿಣಿ. ಸುಮಾರು 50ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿದ್ದರು. ‘ಬೇರು ಬೆಂಕಿ ಬಿಳಲು’ ಎಂಬ ಜೀವನಯಾನದ ಹೃದಯಸ್ಪರ್ಶಿ ಸಂಕಥನದಲ್ಲಿ ಅವರ ಸುದೀರ್ಘ ಜೀವನದ ನೆನಪುಗಳು ದಾಖಲಾಗಿವೆ. ಅವರ ಆತ್ಮಕ್ಕೆ ಶಾಂತಿಯನ್ನು, ಡಾ. ಹಂಪನಾ ಮತ್ತು ಅವರ ಕುಟುಂಬವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಹಾರೈಸುತ್ತೇವೆ ಎಂದು ತಿಳಿಸಿದ್ದಾರೆ.