ರಾಮರಾಜ್ಯದ ಕನಸು ನನಸಾಗಿಸಲು ಹೊರಟಿದ್ದಾರೆ ಸಿದ್ದರಾಮಯ್ಯ

suttur mutt 2
Published on

ಮೈಸೂರು: ರಾಮಮಂದಿರ ನಿರ್ಮಾಣದ ಕನಸು ನನಸಾಗಿದ್ದು, ರಾಮರಾಜ್ಯದ ಕನಸು ಕೂಡ ನನಸಾಗುವ ಅವಶ್ಯಕತೆ ಇದೆ. ರಾಮರಾಜ್ಯದ ಕನಸನ್ನು ನನಸು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳ ಹೇಳಿದರು.

ಸುತ್ತೂರು ಮಠದ ಮೈಸೂರು ಶಾಖೆಯಲ್ಲಿ ಮಂಗಳವಾರ ಆಯೋಜಿಸಿದ್ದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 108ನೇ ಜಯಂತಿ ಮಹೋತ್ಸವದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೂರು ದಿನಗಳನ್ನು ಪೂರೈಸಿದ್ದು, ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಜಯಂತಿ ಮಹೋತ್ಸವದಲ್ಲಿ ಅರಮನೆ (ಸರ್ಕಾರ) ಹಾಗೂ ಗುರುಮನೆ (ಮಠ) ಒಂದಾಗಿದೆ. ಗುರುಮನೆ ಹಾಗೂ ಅರಮನೆಯ ಸಹಯೋಗದಿಂದ ಪ್ರಜೆಗಳ ಹಾಗೂ ರಾಮರಾಜ್ಯದ ಕನಸು ನನಸಾಗಲಿ ಎಂದು ಹೇಳಿದರು.

ಮಹಾತ್ಮರ ಬದುಕು ತಮಗೋಸ್ಕರ ಇರುವುದಿಲ್ಲ, ಬದಲಾಗಿ ಸಮಾಜಕ್ಕೆ ಮುಡಿಪಾಗಿರುತ್ತದೆ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ತಮ್ಮ ಬದುಕನ್ನು ಸಮಾಜಕೋಸ್ಕರ ಮುಡಿಪಾಗಿಟ್ಟರು. ಈ ಕಾರಣಕ್ಕೆ ಶ್ರೀಗಳು ರಾಜ ಮನೆತನದಿಂದ ರಾಜ ಗುರುತಿಲಕ ಬಿರುದು ಪಡೆದರು ಎಂದರು.

ಶ್ರೀ ಸುತ್ತೂರು ಮಠ ಶ್ರೀ ಶಿವರಾತ್ರಿ ದೇಶೀಕೆಂದ್ರ ಸ್ವಾಮೀಜಿ ಸಾನ್ನಿಧ್ಯ, ವೇದಿಕೆಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳ ಸಾನ್ನಿಧ್ಯ ವಹಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ತನ್ವೀರ್ ಸೇಠ್, ಪ್ರಕಾಶ್ ಹುಕ್ಕೇರಿ, ಟಿ.ಎಸ್.ಶ್ರೀವತ್ಸ, ಅನಿಲ್ ಚಿಕ್ಕಮಾದು, ಕೆ.ಹರೀಶ್ ಗೌಡ, ಡಿ. ರವಿಶಂಕರ್, ದರ್ಶನ್, ಧ್ರುವನಾರಾಯಣ್, ಗಣೇಶ್ ಪ್ರಸಾದ್, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಮೇಯರ್ ಶಿವಕುಮಾರ್, ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಎಂ.ಕೆ. ಸೋಮಶೇಖರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net