ಸುತ್ತೂರು ಮಠ ಹೆಮ್ಮರವಾಗಿ ಬೆಳೆಯಲು ರಾಜೇಂದ್ರ ಶ್ರೀಗಳ ದೂರದೃಷ್ಟಿ ಕಾರಣ : ಸಿದ್ದರಾಮಯ್ಯ

suttur mutt
Published on

ಮೈಸೂರು: ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ (ಶ್ರೀ ಸುತ್ತೂರು ಮಠ) 23ನೇ ಪೀಠಾಧಿಪತಿ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರಿಗೆ ಸಾಕಷ್ಟು ದೂರ ದೃಷ್ಟಿ ಇತ್ತು. ಅದರ ಫಲವಾಗಿ ಸುತ್ತೂರು ಮಠ ಧಾರ್ಮಿಕ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸುತ್ತೂರು ಮಠದ ಮೈಸೂರು ಶಾಖೆಯಲ್ಲಿ ಮಂಗಳವಾರ ಆಯೋಜಿಸಿದ್ದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 108ನೇ ಜಯಂತಿ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ಜೆಎಸ್‌ಎಸ್ ಮಹಾವಿದ್ಯಾಪೀಠ ಇಷ್ಟೊಂದು ವಿಸ್ತಾರವಾಗಿ ಬೆಳೆಯಲು ರಾಜೇಂದ್ರ ಶ್ರೀಗಳು ಹಾಕಿದ ಅಡಿಪಾಯವೇ ಕಾರಣ. ಜಾತಿ, ಧರ್ಮ ಬೇದವಿಲ್ಲದೆ ಹಳ್ಳಿಗಾಡಿನ ಮಕ್ಕಳು ಹಾಗೂ ಅಕ್ಷರ ಸಂಸ್ಕೃತಿಯಿ ಂದ ವಂಚಿತರಾದವರಿಗೆ ಶಿಕ್ಷಣ ಕೊಡಲು ಶ್ರೀಗಳು ಪ್ರಾಮಾಣಿಕ ಪ್ರಯತ್ನ ಮಾಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶೂದ್ರ ಸಮುದಾಯ ಹಲವಾರು ಶತಮಾನಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಇದರಿಂದ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಹೆಚ್ಚಾಗಿ ಕಂಡುಬಂತು. ಸ್ವಾತಂತ್ರೃ ನಂತರ ಎಲ್ಲರಿಗೂ ಶಿಕ್ಷಣ ದೊರೆತು ಅಸಮಾನತೆಯ ಪ್ರಮಾಣ ಕಡಿಮೆಯಾಗುತ್ತಿದೆ. ಯಾವುದೇ ಸಮಾಜ ಶಿಕ್ಷಣ ಪಡೆಯದೆ ಹೋದರೆ ಸ್ವಾಭಿಮಾನದಿಂದ ಬದುಕುವುದು ಕಷ್ಟ. ಇದನ್ನು ಮನಗಂಡು ರಾಜೇಂದ್ರ ಶ್ರೀಗಳು ಎಲ್ಲರಿಗೂ ಶಿಕ್ಷಣ ದೊರೆಯುವಂತೆ ಮಾಡಿದರು ಎಂದು ಹೇಳಿದರು.

ಪ್ರಸ್ತುತ ದೇಶದಲ್ಲಿ ಸಾಕ್ಷರತೆ ಪ್ರಮಾಣ ಶೇ.78 ರಷ್ಟು ಮಾತ್ರ ಇದೆ. ಎಲ್ಲರೂ ಶಿಕ್ಷಣ ದೊರೆಯಬೇಕು, ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಗುಣಮಟ್ಟದ ಶಿಕ್ಷಣದಿಂದ ಪ್ರತಿಯೊಬ್ಬರಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆ ಬೆಳೆಯುತ್ತದೆ. ವೈಜ್ಞಾನಿಕ-ವೈಚಾರಿಕ ಚಿಂತನೆಗಳು ಇಲ್ಲವಾದರೆ ಸಮಾಜಕ್ಕೆ ಜಡತ್ವ ಬಡಿಯುತ್ತದೆ. ಕುವೆಂಪು ಅವರ ಆಶಯದ ವಿಶ್ವ ಮಾನವ ಪ್ರಜ್ಞೆ ವಿಸ್ತರಿಸಿದಾಗ ಮಾತ್ರ ಸಮಾಜಕ್ಕೆ ಚಲನಶೀಲತೆ ಬರುತ್ತದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ರಾಜೇಂದ್ರ ಶ್ರೀಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರು ಎಂದು ಹೇಳಿದರು.

ನಾವು ಎಷ್ಟು ವರ್ಷ ಬದುಕುತ್ತೇವೆ ಎಂಬುದು ಮುಖ್ಯವಲ್ಲ, ಬದುಕನ್ನು ಸಾರ್ಥಕ ಮಾಡಿಕೊಂಡಿದ್ದೇವೆಯೇ ಎಂಬುದು ಮುಖ್ಯ. ರಾಜೇಂದ್ರ ಶ್ರೀಗಳು ಸಮಾಜಮುಖಿಯಾಗಿ ಬದುಕಿ ಬದುಕನ್ನು ಸಾರ್ಥಕ ಪಡಿಸಿಕೊಂಡರು. ಸುತ್ತೂರು ಮಠದಲ್ಲಿ 5 ಸಾವಿರ ಮಕ್ಕಳಿಗೆ ಪ್ರತಿನಿತ್ಯ ಅನ್ನ ದಾಸೋಹ ನೀಡಲಾಗುತ್ತಿದೆ. ದೆಲ್ಲ ಹೇಗೆ ಸಾಧ್ಯವಾಯಿತು ಎಂದರೆ ರಾಜೇಂದ್ರ ಶ್ರೀಗಳ ಇಚ್ಛಾಶಕ್ತಿಯೇ ಕಾರಣ. ಅದನ್ನು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದರು.

ಬಸವಾದಿ ಶರಣರ ಆಶಯದಂತೆ ಅಶಕ್ತರಿಗೆ ಶಕ್ತಿ ತುಂಬುವ ಗ್ಯಾರಂಟಿ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಜಾರಿಗೊಳಿಸಿದೆ. ಎಲ್ಲ ಜಾತಿ, ಧರ್ಮದವರಿಗೆ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಗ್ಯಾರಂಟಿ ಕಾರ್ಯಕ್ರಮಗಳನ್ನು ಜನರಿಗೆ ಒಪ್ಪಿಸಿದ್ದೇವೆ. ಬಸವಣ್ಣ, ಅಂಬೇಡ್ಕರ್, ಗಾಂಧಿ ಅವರ ಸಾಮಾಜಿಕ ನ್ಯಾಯದ ಆಶಯಗಳು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಕಾಯಕದಲ್ಲಿವೆ. ನಮ್ಮ ಸರ್ಕಾರ ಕೂಡ ಈ ಎಲ್ಲರ ಕಾಯಕ ಶ್ರೇಷ್ಠ ಪ್ರಜ್ಞೆಯಿಂದ ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಮನುಕುಲದ ಉದ್ಧಾರಕ್ಕಾಗಿ ಸುತ್ತೂರು ಮಠ ಎಲ್ಲ ಸಮುದಾ ಯದವರಿಗೂ ಶಿಕ್ಷಣ ನೀಡುತ್ತಿದೆ. ಬಡವರು, ದೀನ ದಲಿತರು, ಹಿಂದುಳಿದ ಮಕ್ಕಳಿಗೆ ಶ್ರೀಮಠ ಉಚಿತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಭಿಕ್ಷೆಬೇಡಿ, ಕರಡಿಗೆಯನ್ನು ಮಾರಿ ರಾಜೇಂದ್ರ ಶ್ರೀಗಳು ಮಕ್ಕಳಿಗೆ ಅನ್ನ ದಾಸೋಹ ನೀಡಿದ್ದಾರೆ. ಇದು ಜಾತ್ಯತೀತ ಹಾಗೂ ಉದಾತ್ತವಾದ ಮಠವಾಗಿದೆ ಎಂದು ಬಣ್ಣಿಸಿದರು.

‘ರಾಜಗುರುತಿಲಕ’ ಹಾಗೂ ‘ಪ್ರಸಾದ’ ವಿಶೇಷ ಸಂಚಿಕೆಯನ್ನು ಸಂಸದ ಪ್ರತಾಪ್ ಸಿಂಹ ಬಿಡುಗಡೆ ಮಾಡಿದರು. ಶ್ರೀ ಸುತ್ತೂರು ಮಠ ಶ್ರೀ ಶಿವರಾತ್ರಿ ದೇಶೀಕೆಂದ್ರ ಸ್ವಾಮೀಜಿ ಸಾನ್ನಿಧ್ಯ, ವೇದಿಕೆಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳ ಸಾನ್ನಿಧ್ಯ ವಹಿಸಿದ್ದರು.

ಶಾಸಕರಾದ ತನ್ವೀರ್ ಸೇಠ್, ಪ್ರಕಾಶ್ ಹುಕ್ಕೇರಿ, ಟಿ.ಎಸ್.ಶ್ರೀವತ್ಸ, ಅನಿಲ್ ಚಿಕ್ಕಮಾದು, ಕೆ.ಹರೀಶ್ ಗೌಡ, ಡಿ. ರವಿಶಂಕರ್, ದರ್ಶನ್, ಧ್ರುವನಾರಾಯಣ್, ಗಣೇಶ್ ಪ್ರಸಾದ್, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಮೇಯರ್ ಶಿವಕುಮಾರ್, ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಎಂ.ಕೆ. ಸೋಮಶೇಖರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net