ಅನ್ನ, ಅಕ್ಷರ, ಆರೋಗ್ಯಕ್ಕೆ ಸುತ್ತೂರು ಮಠ ಹೆಚ್ಚಿನ ಮಹತ್ವ

6-kollegal-1,,,
ಕೊಳ್ಳೇಗಾಲದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ರಕ್ತದಾನ ಮಾಡಿದರು.
Published on

ಕೊಳ್ಳೇಗಾಲ: ಸುತ್ತೂರು ಮಠವು ಅನ್ನ, ಅಕ್ಷರ, ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶುಕ್ರವಾರ ಜಗದ್ಗುರು ಶ್ರೀ ರಾಜೇಂದ್ರ ಮಹಾಸ್ವಾಮಿಗಳವರ ಜಯಂತ್ಯುತ್ಸವ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಶ್ರೀ ಡಾ.ರಾಜೇಂದ್ರ ಮಹಾಸ್ವಾಮೀಜಿ ಅವರ ಜಯಂತಿ ಹಿನ್ನೆಲೆಯಲ್ಲಿ ಏರ್ಪಡಿಸಿರುವ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸ್ವಯಂಪ್ರೇರಿತವಾಗಿ ದಾನಿಗಳು ರಕ್ತದಾನ ಮಾಡುತ್ತಿದ್ದಾರೆ. ಸುತ್ತೂರು ಮಠದ ಸಮಾಜಮುಖಿ ಕಾರ್ಯವು ಎಲ್ಲರಿಗೂ ಮಾದರಿಯಾಗಿದೆ. ಮಠದ ನೆರವಿನಿಂದ ಹಳ್ಳಿಗಾಡಿನ ಬಡ ಹಾಗೂ ರೈತಾಪಿ ವರ್ಗದ ಮಕ್ಕಳು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗಿದೆ. ಸ್ಪರ್ಧಾತ್ಮಕ ಯುಗದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸುತ್ತಿದ್ದಾರೆ. ಜಾಗತಿಕ ಯುಗದಲ್ಲಿ ಉದ್ಯೋಗ ತೆಗೆದುಕೊಳ್ಳುವುದು ಸುಲಭದ ಮಾತಲ್ಲ. ಇದನ್ನು ಗಮನಿಸಿ ಮಕ್ಕಳು ಚೆನ್ನಾಗಿ ಓದಬೇಕು. ಉತ್ತಮ ಪ್ರಜೆಯಾಗಿ ಹೊರಹೊಮ್ಮಬೇಕು ಎಂದು ಕಿವಿಮಾತು ಹೇಳಿದರು.

ಹನೂರು ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಡಾ.ಶ್ರೀ ರಾಜೇಂದ್ರ ಮಹಾಸ್ವಾಮೀಜಿ ಚಿಂತನೆ ಹಾಗೂ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು. ವಿದ್ಯೆ ಹಾಗೂ ದಾಸೋಹ ವ್ಯವಸ್ಥೆಗೆ ಅಡಿಗಲ್ಲನ್ನು ಸುತ್ತೂರಿನ ಶ್ರೀ ಮಠ ಹಾಕಿದೆ. ಲಕ್ಷಾಂತರ ವಿದ್ಯಾ ರ್ಥಿಗಳು ಶ್ರೀ ಮಠದ ನೆರಳಲ್ಲಿ ಭವಿಷ್ಯ ರೂಪಿಸಿಕೊಂಡಿದ್ದಾರೆ. ಪ್ರಸ್ತುತ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಡಾ.ಶ್ರೀ ರಾಜೇಂದ್ರ ಮಹಾಸ್ವಾಮಿಗಳ ಹಾದಿಯಲ್ಲೇ ನಡೆಯುತ್ತಿದ್ದಾರೆ ಎಂದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಜೆಎಸ್‌ಎಸ್ ಸಂಸ್ಥೆ ಪ್ರಪಂಚಾದ್ಯಂತ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಉತ್ತ ಮ ಸೇವೆ ನೀಡುತ್ತಿದೆ. ಡಾ.ಶ್ರೀ ರಾಜೇಂದ್ರ ಮಹಾಸ್ವಾಮೀಜಿ ಅವರ ಜಯಂತಿ ಅಂಗವಾಗಿ ಆರೋಗ್ಯ ಶಿಬಿರ ಹಾಗೂ ರಕ್ತದಾಬ ಶಿಬಿರ ಕೊಳ್ಳೇಗಾಲದಲ್ಲಿ ಆಯೋಜನೆಗೊಂಡಿದೆ. ಜಿಲ್ಲೆಗೆ ತಿಂಗಳಿಗೆ 680 ಯೂನಿಟ್ ರಕ್ತದ ಅವಶ್ಯಕತೆ ಇದೆ. ಆದರೆ, ನಮ್ಮಲ್ಲಿ ಕೇವಲ 500 ಯೂನಿಟ್ ಶೇಖರಣೆ ಆಗುತ್ತಿದೆ. ಇನ್ನುಳಿದ 150 ಯೂನಿಟ್‌ಗೆ ಪರದಾಡುವ ಪರಿಸ್ಥಿತಿ ನಮ್ಮಲಿದೆ. ಜಿಲ್ಲೆಯಲ್ಲಿ 4 ರಕ್ತನಿಧಿ ಕೇಂದ್ರವಿದೆ. ಇದನ್ನು ಹೆಚ್ಚಿಸಲು ಸಾರ್ವಜನಿಕರಿಂದ ಒತ್ತಾಯವಿದೆ. ಸಮಾಜ ನಮಗೇನು ಕೊಟ್ಟಿದೆ ಎಂಬುದಕ್ಕಿಂತ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎಂಬುದು ಮುಖ್ಯವಾದ ಅಂಶ. ರಕ್ತದಾನ ಮಹಾ ದಾನ, ಜೀವ ಉಳಿಸುವ ಕೆಲಸವನ್ನು ಎಲ್ಲರೂ ಮಾಡಬೇಕು. ಆದ್ದರಿಂದ ರಕ್ತದಾನ ಮಾಡಬೇಕೆಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಚಿದಂಬರಂ ಮಾತನಾಡಿ, ರಕ್ತದಾನ ಶ್ರೇಷ್ಠವಾದದ್ದು. ರಕ್ತದಾನ ಮಾಡಬೇಕಾದರೆ ಮೊದಲು ನಮ್ಮಲ್ಲಿ ರಕ್ತ ಇರಬೇಕು. ರಕ್ತ ಹೇಗೆ ಉತ್ಪತ್ತಿಯಾಗುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಆಗ ಮಾತ್ರ ಮತ್ತೊಬ್ಬರಿಗೆ ರಕ್ತ ನೀಡಿ ಜೀವ ಉಳಿಸಬಹುದು. ಸರ್ಕಾರ ಹಸಿವುಮುಕ್ತ ಕರ್ನಾಟಕ ಮಾಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಎಲ್ಲರೂ ಉತ್ತಮ ಆಹಾರ ಸೇವಿಸಬೇಕು ಎಂದರು.

ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಜಿಪಂ ಸಿಇಒ ಮೋನಾರೋತ್, ತಹಸೀಲ್ದಾರ್ ಮಂಜುಳಾ, ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ದತ್ತೇಶ್‌ಕುಮಾರ್, ಯುವ ಮುಖಂಡ ಎಸ್.ನಿಶಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಪುಟ್ಟಣ್ಣ, ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಎಸ್. ಕೊಂಗಳಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net