

ಸರಗೂರು: ಸಮಾಜದ ಅಭಿವೃದ್ಧಿಗೆ ಮಠ, ಮಾನ್ಯಗಳ ಕೊಡುಗೆ ಅಪಾರವಾಗಿದ್ದು, ಬಸವಾದಿ ಶರಣರ ಆದರ್ಶದಂತೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ನೀಡಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.
ಪಟ್ಟಣದ ಜೆಎಸ್‌ಎಸ್ ಕಾಲೇಜಿನ ಆವರಣದಲ್ಲಿ ಭಾನುವಾರ ಮೈಸೂರು-ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯತ ಮಠಾಧಿಪತಿಗಳ ಗೋಷ್ಠಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ, ಶ್ರೀ ರಾಜೇಂದ್ರ ಸ್ವಾಮೀಜಿ ಅವರ ಭಕ್ತ ಬಳಗ, ಮೈಸೂರಿನ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಶತೋತ್ತರ ದಶಮಾನೋತ್ಸವ ದೀಕ್ಷಾ ಸಂಸ್ಕಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನವ ಭಾರತ ನಿರ್ಮಾಣದಲ್ಲಿ ಮಠ, ಮಾನ್ಯಗಳ ಸೇವೆ ಪ್ರಮುಖವಾಗಿದ್ದು, ಇಡೀ ವಿಶ್ವಕ್ಕೆ ಜ್ಞಾನದ ಬೆಳಕು ನೀಡಿದ ಸುತ್ತೂರು ಗುರುಪರಂಪರೆ ಸೇವೆ ಕೊಡುಗೆ ಸ್ಮರಿಸಿದ ಅವರು ನೀಡಿರುವ ತತ್ವ ಸಿದ್ಧಾಂತಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದೆ. ಇಂತಹ ಮಹನೀಯರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಅರ್ಥ ಪೂರ್ಣವಾಗಿ ಆಚರಣೆ ಮಾಡುವ ಮೂಲಕ ಅವರ ಕೃಪೆಗೆ ಪಾತ್ರರಾಗೋಣ. ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗೋಣ. ಎಲ್ಲ ಜಾತಿಯವರಿಗೂ ಆಶ್ರಯ ಕೊಟ್ಟು, ಅನ್ನ, ಅಕ್ಷರ, ಆರೋಗ್ಯ ಸೇವೆ ನೀಡುತ್ತಾ ಬಂದಿರುವ ಜೆಎಸ್‌ಎಸ್ ಸಂಸ್ಥೆಯ ಕಾರ್ಯವೈಖರಿ ಮೆಚ್ಚುವಂಥದ್ಧು ಶ್ಲಾಘನೀಯ ಎಂದು ಹೇಳಿದರು.
ಮಕ್ಕಳು ದುಶ್ಚಟಗಳಿಗೆ ಬಲಿಯಾಗಬಾರದು. ಮೊಬೈಲ್ ಸದ್ಬಳಕೆ ಮಾಡಿಕೊಳ್ಳಬೇಕು. ಉನ್ನತಮಟ್ಟದ ಗುರಿಯನ್ನಿಟ್ಟುಕೊಂಡು ಮುನ್ನುಗ್ಗಬೇಕು. ಆಗ ಸುಲಭವಾದ ಗೆಲುವು ಸಿಗಲಿದೆ. ದೈಹಿಕ, ಬೌದ್ಧಿಕವಾಗಿ ಬೆಳೆವಣಿಗೆ ಹೊಂದಿ ಬಲಿಷ್ಠವಾಗಬೇಕು. ತಮ್ಮಲ್ಲಿರುವ ಪ್ರತಿಭೆಯನ್ನು ಹೊರತರುವ ಕೆಲಸ ಮಾಡಬೇಕು. ಮಕ್ಕಳಿಗೆ ಆಸಕ್ತಿಗುಣವಾಗಿ ಓದಲು ಪ್ರೇರೇಪಣೆ ನೀಡಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸುವಲ್ಲಿ ಪಾಲಕರು, ಶಿಕ್ಷಕರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಪ್ರತಿಭೆ ಪುರಸ್ಕಾರ ಹೊಸ ಚೈತನ್ಯ ತುಂಬಲಿದೆ. ಇನ್ನು ಹೆಚ್ಚಿನ ಕಲಿಕೆಗೆ ನಾಂದಿಯಾಗಲಿದೆ. ಸ್ಪೂರ್ತಿಯ ಚಿಲುಮೆಯೂ ಆಗಲಿದೆ. ಪಾಲಕರು ಮಕ್ಕಳ ಭವಿಷ್ಯ ರೂಪಿಸಬೇಕು. ಎಲ್ಲರೂ ಶಿಕ್ಷಣವಂತರಾಗಬೇಕು. ಹಿರಿಯರಿಗೆ ಗೌರವ ಕೊಡಬೇಕು. ಉತ್ತಮ ಸಂಸ್ಕಾರ ಕಲಿಯಬೇಕು ಎಂದು ತಿಳಿಸಿದರು.
ಶಾಸಕರು ಹಾಗೂ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಅಧ್ಯಕ್ಷ ಅನಿಲ್ ಚಿಕ್ಕಮಾದು, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಸಚಿವ ಶಿವಣ್ಣ, ಮಾಜಿ ಶಾಸಕ ಚಿಕ್ಕಣ್ಣ ಮಾತನಾಡಿದರು.
ಹಂಚೀಪುರ ಮಠದ ಚನ್ನಬಸವ ಸ್ವಾಮೀಜಿ, ದಡದಹಳ್ಳಿ ಮಠದ ಷಡಕ್ಷರಿಸ್ವಾಮೀಜಿ, ಬಿಡಗಲು ಮಠದ ಮಹದೇವಸ್ವಾಮೀಜಿ, ಕಿರಿಯ ತೋಂಟದಾರ್ಯಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ನಂದಿನಿ ಪ್ರಮೋದ್ ಅವರು ಹೊರ ತಂದಿರುವ ದೇವರೇ ನೀನು ಯೋಚಿಸಲೇಬೇಕಿತ್ತು ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ಡಾ.ರಾಜೇಂದ್ರ ಮಹಾಸ್ವಾಮಿಗಳ ಭಕ್ತ ಬಳಗದ ಗೌರವಾಧ್ಯಕ್ಷ ದಡದಹಳ್ಳಿ ಡಿ.ಜಿ.ಶಿವರಾಜು, ಅಧ್ಯಕ್ಷ ಮಹೇಶ್, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕಾಟವಾಳು ವೀರಭದ್ರಪ್ಪ, ಜಿಲ್ಲಾ ನಿಕಟ ಪೂರ್ವ ಕೋಶಾಧ್ಯಕ್ಷ ವರುಣ್ ಮಹೇಶ್, ಬಸವ ಬಳಗದ ತಾಲೂಕು ಅಧ್ಯಕ್ಷ ಹಂಚೀಪುರ ಗಣಪತಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಯೋಗೇಶ್, ಯುವ ಘಟಕದ ಅಧ್ಯಕ್ಷ ಪಿ.ನಂದೀಶ್, ಭಕ್ತ ಬಳಗದ ಪ್ರಧಾನ ಕಾರ್ಯದರ್ಶಿ ಬಾಡಗ ಸಿದ್ದಪ್ಪ, ಅಕ್ಕನ ಬಳಗದ ತಾಲೂಕು ಅಧ್ಯಕ್ಷೆ ಸುನಂದರಾಜು, ಭಕ್ತ ಬಳಗದ ಪದಾಧಿಕಾರಿಗಳು ಹಾಜರಿದ್ದರು.