ಬಿಜೆಪಿ ಧಾರವಾಡ ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ಸುತಗಟ್ಟಿ ಪುನರಾಯ್ಕೆ

New BJP New123
Published on

ಹುಬ್ಬಳ್ಳಿ : ಬಿಜೆಪಿ ಧಾರವಾಡ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಸ್ಥಾನಕ್ಕೆ ನಿಂಗಪ್ಪ ಸುತಗಟ್ಟಿ ಅವರನ್ನು ಚುನಾವಣೆ ಮೂಲಕ ಪುನರಾಯ್ಕೆಗೊಳಿಸಲಾಗಿದೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿ ರಾಜ್ಯ ಪ್ರಕೋಷ್ಠದ ಸಂಯೋಜಕ ಹಾಗೂ ಚುನಾವಣಾಧಿಕಾರಿ ದತ್ತಾತ್ರೇಯ ಎಸ್. ಅವರು, ಮುಂದಿನ ಮೂರು ವರ್ಷಗಳ ಅವಧಿಗೆ ನಿಂಗಪ್ಪ ಸುತಗಟ್ಟಿ ಅವರು ಧಾರವಾಡ ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿದರು.

ಪ್ರತಿ ಮೂರು ವರ್ಷಗಳಿಗೊಮ್ಮೆ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ. ಫೆಬ್ರುವರಿ ಅಂತ್ಯದೊಳಗೆ ಎಲ್ಲ ಘಟಕಗಳಿಗೆ ಚುನಾವಣೆ ನಡೆಯಲಿದೆ. ಧಾರವಾಡ ಗ್ರಾಮಾಂತರ ಘಟಕಕ್ಕೆ ಈ ಬಾರಿ ಹಾಲಿ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ವಿರುದ್ಧ ಬೇರೆ ಯಾರೂ ಅರ್ಜಿ ಸಲ್ಲಿಸಲಿಲ್ಲ. ಹೀಗಾಗಿ, ಅವರನ್ನೇ ಅಧ್ಯಕ್ಷರನ್ನಾಗಿ ಪುನರಾಯ್ಕೆಗೊಳಿಸಲಾಗಿದೆ ಎಂದು ತಿಳಿಸಿದರು.

ಧಾರವಾಡ ಗ್ರಾಮಾಂತರ ಜಿಲ್ಲೆಗಳ ಏಳೂ ಮಂಡಲಗಳ ಅಧ್ಯಕ್ಷರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ನವಲಗುಂದ ಮಂಡಲಕ್ಕೆ ಗಂಗಪ್ಪ ಮನವಿ, ನವಲಗುಂದ-ಹುಬ್ಬಳ್ಳಿ ಮಂಡಲಕ್ಕೆ ಮಂಜುನಾಥ ಗಣಿ, ಕುಂದಗೋಳ ಮಂಡಲಕ್ಕೆ ನಾಗನಗೌಡ ಸಾತ್ಮಾರ್, ಕುಂದಗೋಳ-ಹುಬ್ಬಳ್ಳಿ ಮಂಡಲಕ್ಕೆ ಷಣ್ಮುಖ ಐಹೊಳೆ, ಕಲಘಟಗಿ ಮಂಡಲಕ್ಕೆ ಯಲ್ಲಾರಿ ಶಿಂಧೆ, ಅಳ್ನಾವರ ಮಂಡಲಕ್ಕೆ ಯಲ್ಲಪ್ಪ ಹುಲಿಯಪ್ಪನವರ ಹಾಗೂ ಧಾರವಾಡ ಗ್ರಾಮೀಣ ಮಂಡಲಕ್ಕೆ ಶಂಕರ ಕುಮಾರದೇಸಾಯಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ವಿವರಿಸಿದರು.

ಶಾಸಕ ಎಂ.ಆರ್.ಪಾಟೀಲ, ಶಿಸ್ತು ಸಮೀತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಬಸವರಾಜ ಕುಂದಗೋಳಮಠ, ಗುರು ಪಾಟೀಲ, ಈರಣ್ಣ ಜಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net