ಸತತ ಪ್ರಯತ್ನ ವೇ ಸಾಧನೆಯ ಸೂತ್ರ - ವೇದ ಅಕಾಡೆಮಿ ಅಧ್ಯಕ್ಷ ಶಿವಾನಂದ ಕೆಲೂರ ಹೇಳಿಕೆ

Shivanand Kelur
ವೇದ ಅಕಾಡೆಮಿ ಅಧ್ಯಕ್ಷ ಶಿವಾನಂದ ಕೆಲೂರ
Published on

ವಿಜಯಪುರ: ಸ್ಪಷ್ಟ ಗುರಿ, ಸೂಕ್ತ ಮಾರ್ಗದರ್ಶನ, ಸತತ ಪ್ರಯತ್ನವೊಂದಿದ್ದರೆ ಏನನ್ನಾದರೂ ಸಾಧಿಸಬಹುದೆಂಬುದಕ್ಕೆ ಪದ್ಮಶ್ರೀ ವಿಜಯ ಸಂಕೇಶ್ವರ, ವರ್ಗಿಸ್ ಕುರಿಯನ್ ಮತ್ತಿತರ ಸಾಧಕರೇ ಸಾಕ್ಷಿ ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯ ದರ್ಶಿ ಹಾಗೂ ವೇದ ಅಕಾಡೆಮಿ ಅಧ್ಯಕ್ಷ ಶಿವಾನಂದ ಕೆಲೂರ ಹೇಳಿದರು.

ಇಲ್ಲಿನ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ವಿಜಯವಾಣಿ ಹಾಗೂ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಎಜುಕೇಶನ್ ಎಕ್ಸಪೋದ ಎರಡನೇ ದಿನವಾದ ಮಂಗಳವಾರ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಉಪನ್ಯಾಸ ನೀಡಿದರು.

ಅತ್ಯಂತ ಕಡುಕಷ್ಟದಲ್ಲಿ ಲಾರಿ ಚಾಲಕನಾಗಿ ಬದುಕು ಕಟ್ಟಿಕೊಳ್ಳುವ ಮೂಲಕ ಒಂದು ಲಾರಿಯನ್ನೇ ಸಾವಿರಾರು ಲಾರಿನ್ನಾಗಿ ಬೆಳೆಸಿದ ಪ್ರತಿಷ್ಠಿತ ಉದ್ಯಮಿ ವಿಜಯ ಸಂಕೇಶ್ವರ ಅವರು ನಮಗೆಲ್ಲರಿಗೂ ಮಾದರಿಯಾಗಬೇಕೆಂದರು.

ವರ್ಗಿಸ್ ಕುರಿಯನ್ ಅವರು ಅಮೂಲ್ ಎಂಬ ಹಾಲಿನ ಉತ್ಪನ್ನ ತಯಾರಿಸಿ ಮಾರಾಟ ಮಾಡುವ ಮೂಲಕ ಕ್ಷೀರ ಕ್ರಾಂತಿಯನ್ನೇ ಮಾಡಿದರು.

ಬ್ರಿಟನ್ ನಲ್ಲಿ ಒಬ್ಬ ವ್ಯಕ್ತಿ ಭಾರತದ ಹಾಲು ಬ್ರಿಟನ್ ನ ಚರಂಡಿ ನೀರಿಗೆ ಸಮ ಎಂಬುದನ್ನೇ ಸವಾಲಾಗಿ ಸ್ವೀಕರಿಸಿದ್ದ ಕುರಿಯನ್ ಅವರು ಸಣ್ಣ ಸಹಕಾರಿ‌ ಸಂಘ ಸ್ಥಾಪಿಸಿ ಅಮೂಲ್ ಉತ್ಪನ್ನಗಳನ್ನು ಜಗತ್ತಿನಾದ್ಯಂತ ಮಾರಾಟ ಮಾಡುತ್ತಿದ್ದಾರೆ. ಮುಂದೊಂದು ದಿನ ಅದೇ ಕುರಿಯನ್ ಅವರನ್ನು ಆಹ್ವಾನಿಸಿ ಬ್ರಿಟನ್ ಸನ್ಮಾನಿಸಿತು. ಯಾವ ವ್ಯಕ್ತಿ ಕುರಿಯನ್ ಅವರನ್ನು ಟೀಕಿಸಿದ್ದನೋ ಆತನೇ ಅವರ ಸಾಧನೆಯ ಸಂದರ್ಶನ ಮಾಡುವ ಪ್ರಸಂಗ ಉದ್ಭವಿಸಿತು. ಆಗ ಕುರಿಯನ್ ಅವರು ಬೆಳಗ್ಗೆಯಿಂದ ಸಂಜೆಯವರೆಗೂ ಅವನನ್ನು ಹೊರ ನಿಲ್ಲಿಸಿದ್ದರು. ಇಂಥ ಅನೇಕ ಸಾಧಕರು ನಮ್ಮ ಮಧ್ಯದಲ್ಲಿದ್ದಾರೆ. ಅವರನ್ನು ನಾವು ಪ್ರೇರಣೆಯಾಗಿ ಇರಿಸಿಕೊಳ್ಳಬೇಕೆಂದರು.

ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಹೇಗೆ?

ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರಾಥಮಿಕ ಹಂತದಿಂದಲೇ ತಯಾರಿ ಆರಂಭಿಸಬೇಕು. ನಾಲ್ಕು ಮತ್ತು ಐದನೇ ತರಗತಿಯಲ್ಲೇ ಪ್ರಾಥಮಿಕ ಜ್ಞಾನ ಗಟ್ಟಿಯಾಗಿ ಮನನ ಮಾಡಿಕೊಳ್ಳಬೇಕು. ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ನವೋದಯ ಮುಂತಾದ ಪರೀಕ್ಷೆಗಳನ್ನು ಎದುರಿಸಬೇಕು.

ಎನ್ ಟಿಎಸ್ ಇ, ಓಲಂಪಿಯಾಡ್ ಎಕ್ಸಾಮಿನೇಶನ್, ಎಮ್ ಎಸ್ ಟಿಎಸ್ ಇ ,ಇಂಡಿಯನ್ ನೇವಿ ಟೆಸ್ಟ್ ಹೀಗೆ ಮುಂತಾದ ಪರೀಕ್ಷೆಗಳಿದ್ದು ಅವುಗಳಿಗಾಗಿ ತಯಾರಿ ಮಾಡಿಕೊಳ್ಳಬೇಕು ಎಂದರು.

ಪಿಯುಸಿ ನಂತರ ಎನ್ ಐಐಟಿ, ಐಐಎಸ್ ಸಿ, ಎನ್ ಐಎಸ್ ಇಆರ್, ಐಐಟಿ, ಎನ್ ಇಎಫ್ ಟಿ, ಎಐಎಲ್ ಇಟಿ ಹೀಗೆ ಮುಂತಾದ ಪರೀಕ್ಷೆಗಳ ಮೂಲಕ ಆಯಾ ಕ್ಷೇತ್ರಗಳಿಗೆ ಪ್ರವೇಶ ಪಡೆಯಬೇಕಿದೆ ಎಂದರು.

ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ, ಕಾನೂನು ಹೀಗೆ ಮುಂತಾದ ಕ್ಷೇತ್ರಗಳಲ್ಲಿ ಸಾಕಷ್ಟು ಉದ್ಯಗವಕಾಶಗಳಿವೆ. ಆ ನಿಟ್ಟಿನಲ್ಲಿ ತರಬೇತಿ ಹೊಂದಬೇಕಷ್ಟೆ. ಅದಕ್ಕಾಗಿ ಪ್ರಾಥಮಿಕ ಹಂತದಿಂದಲೇ ಪ್ರಯತ್ನ ಮಾಡಬೇಕೆಂದರು.

ಪದವಿ ನಂತರ ಐಎಎಸ್, ಐಬಿಪಿಎಸ್, ಐಎಫ್ ಎಸ್ ಹೀಗೆ ಮುಂತಾದ ಪರೀಕ್ಷೆ ಗಳ ಮೂಲಕ ಆಯಾ ಕ್ಷೇತ್ರಗಳಲ್ಲಿ‌ ಉನ್ನತ ಸ್ಥಾನ ಪಡೆಯಬಹುದಾಗಿದೆ.

ಓದುವ ಬಗೆ ಹೇಗೆ?

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳು ಮೊದಲು ಪಠ್ಯಕ್ರಮವನ್ನು ಚೆನ್ನಾಗಿ ಅಧ್ಯಯನ ಮಾಡಬೇಕು. ನಿಯತಕಾಲಿಕೆಗಳನ್ನು, ದಿನಪತ್ರಿಕೆಗಳನ್ನು, ಸಾಧಕರ ಯಶೋಗಾಥೆಗಳ ಕುರಿತು ಅಧ್ಯಯನ ಮಾಡಬೇಕು‌ ಎಂದರು.
ಜ್ಞಾನ ಎಂಬುದು ಸಾಗರ ಇದ್ದಂತೆ ನಮಗೆ ಏನು ಬೇಕೋ ಅದನ್ನು ಮಾತ್ರ ಸ್ವೀಕರಿಸಬೇಕು ಎಂದರು.

ದಿನ ಪತ್ರಿಕೆ ಓದುವುದೂ ಒಂದು ಕಲೆ. ಯಾವುದನ್ನು ಓದಬೇಕೋ ಅದನ್ನಷ್ಟೇ ಹೆಕ್ಕಿ ತೆಗೆದುಕೊಳ್ಳಬೇಕು. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ವಿದ್ಯಮಾನಗಳ ಕುರಿತ ಪ್ರಚಲಿತ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಆ ಬಗ್ಗೆ ನಮಗೆ ಉಪಯುಕ್ತ ವಾದ ಮಾಹಿತಿ ಕಲೆ ಹಾಕಿ ಇಟ್ಟುಕೊಳ್ಳಬೇಕೆಂದರು.
ವಿದ್ಯಾರ್ಥಿಗಳು ಮುಕ್ತವಾಗಿ ಸಂವಾದ ನಡೆಸಿದರು. ವಿದ್ಯಾರ್ಥಿಗಳ ಪ್ರತಿ ಪ್ರಶ್ನೆಗೂ ಶಿವಾನಂದ ಕೆಲೂರ ಸಮರ್ಪಕವಾಗಿ ಉತ್ತರಿಸಿದರು.
ಉಪನ್ಯಾಸಕ ಸುರೇಶ ಜತ್ತಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net