ಮೂಲಸೌಕರ್ಯ ವೃದ್ಧಿಗೆ ಸುಸ್ಥಿರ ಪರಿಹಾರ ಅಗತ್ಯ: ಗರ ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ದೀಪಕ್

100
Published on

ಮೈಸೂರು: ನಗರದ ಮೂಲಸೌಕರ್ಯಗಳಲ್ಲಿ ಹೊಸ ಬದಲಾವಣೆಗಳನ್ನು ತರಲು ಸುಸ್ಥಿರ ಪರಿಹಾರಗಳು ಅತ್ಯಗತ್ಯ ಎಂದು ನಗರ ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ದೀಪಕ್ ಹೇಳಿದರು.

ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್(ವಿವಿಸಿಇ) ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗ ಆಯೋಜಿಸಿದ್ದ ಸ್ಮಾರ್ಟ್ ಕ್ಯಾಂಪಸ್‌ಗಾಗಿ ಸುಸ್ಥಿರ ಪರಿಹಾರಗಳ ಕುರಿತು ರಾಜ್ಯ ಮಟ್ಟದ ಹ್ಯಾಕಥಾನ್‌ನಲ್ಲಿ ಮಾತನಾಡಿದರು.

ಮೈಸೂರು ನಗರ ಪಾಲಿಕೆಯ ಕಾರ್ಯಾಚರಣೆಗಳಲ್ಲಿ ಸುಸ್ಥಿರತೆಯನ್ನು ಅಳವಡಿಸಿಕೊಳ್ಳುವುದರಿಂದ ಆಗುತ್ತಿರುವ ಗಮನಾರ್ಹ ಪ್ರಯೋಜನಗಳ ಬಗ್ಗೆ ಅವರು ವಿವರಿಸಿ, ಹೊಸ ಬದಲಾವಣೆ ಕ್ರಮಗಳಿಂದ ಗಣನೀಯವಾಗಿ ಉಳಿತಾಯಕ್ಕೆ ಕಾರಣವಾಗಿವೆ ಎಂದು ತಿಳಿಸಿದರು.

ನಗರದಲ್ಲಿ ಸಾಂಪ್ರದಾಯಿಕ ಬೀದಿ ದೀಪಗಳನ್ನು ಬದಲಾಯಿಸಿ, ಇಂಧನ-ಸಮರ್ಥ್ಯದ ಎಲ್ಇಡಿ ದೀಪಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಬಿಲ್ ಶೇ.50 ರಷ್ಟು ಕಡಿಮೆಯಾಗಲು ಸಹಕಾರಿಯಾಗಿದೆ. ಹಿಂದೆ ನಾವು ವಿದ್ಯುತ್‌ಗಾಗಿ 50 ಕೋಟಿ ರೂ. ಖರ್ಚು ಮಾಡುತ್ತಿದ್ದೆವು, ಆದರೆ ಈಗ ಅದು 25 ಕೋಟಿ ರೂ.ಗೆ ಇಳಿಸಲಾಗಿದೆ ಎಂದು ಹೇಳಿದರು.

ಹೊಸ ವಿಧಾನವನ್ನು ಇತರ ಸೇವೆಗಳಾದ ಒಳಚರಂಡಿ ಸಂಸ್ಕರಣಾ ಘಟಕಗಳು (ಎಸ್‌ಟಿಪಿ) ಮತ್ತು ನೀರು ನಿರ್ವಹಣಾ ವ್ಯವಸ್ಥೆಗಳಿಗೆ ಅಳವಡಿಸಿಕೊಳ್ಳಬಹುದು. ಇದರಿಂದಾಗಿ ಶೇಕಡಾ 50ಕ್ಕೂ ಹೆಚ್ಚು ವೆಚ್ಚ ಉಳಿತಾಯ ಮಾಡಬಹುದು. ಜತೆಗೆ ನಾಗರಿಕರಿಗೆ ನೀಡುವ ಸೇವೆಗಳು ಕೂಡಾ ಸುಧಾರಿಸಲಿದ್ದು, ಜನರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಹೊಸ ಉಳಿತಾಯ ವಿಧಾನಗಳನ್ನು ಇತರ ಇಲಾಖೆಗಳಿಗೂ ವಿಸ್ತರಿಸಿದರೆ, ನಾವು ಹಣವನ್ನು ಉಳಿತಾಯ ಮಾಡಬಹುದು. ಜತೆಗೆ ಜನರಿಗೆ ನೀಡುತ್ತಿರುವ ಸೇವೆಯ ಗುಣಮಟ್ಟ ಹೆಚ್ಚಿಸಬಹುದು. ಪಾಲಿಕೆಯಲ್ಲಿ ಸಂಭಾವ್ಯ ಯೋಜನೆಗಳನ್ನು ಅನ್ವೇಷಿಸಲು ಮತ್ತು ವಿವಿಧ ಸವಾಲುಗಳನ್ನು ಎದುರಿಸಲು ಸುಸ್ಥಿರ ಪರಿಹಾರಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.

ವಿವಿಸಿಇಯ ಪ್ರಾಂಶುಪಾಲ ಪ್ರೊ. ಬಿ.ಸದಾಶಿವೇಗೌಡ ಮಾತನಾಡಿ, ಬಹುಮಾನ ಗೆಲ್ಲುವುದು ಅಂತಿಮ ಗುರಿಯಲ್ಲ, ಸಕ್ರಿಯವಾಗಿ ಭಾಗವಹಿಸುವುದು ಮತ್ತು ಸಾಧ್ಯವಾದಷ್ಟು ಕಲಿಯುವುದು ಮುಖ್ಯವಾಗುತ್ತದೆ. ಹೀಗಾಗಿ ಇತರರ ಅನುಭವಗಳಿಂದ ಸ್ಫೂರ್ತಿ ಪಡೆಯಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಸ್ಮಾರ್ಟ್ ಕ್ಯಾಂಪಸ್ ಪರಿಸರದಲ್ಲಿ ಸುಸ್ಥಿರತೆಯನ್ನು ಉತ್ತೇಜಿಸುವ ನವೀನ ಪರಿಹಾರಗಳನ್ನು ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಹ್ಯಾಕಥಾನ್ ಹೊಂದಿದೆ. ಅತ್ಯಾಕರ್ಷಕ ನಗದು ಬಹುಮಾನಗಳನ್ನು ಗೆಲ್ಲುವ ಅವಕಾಶದೊಂದಿಗೆ ಸುಸ್ಥಿರ ಅಭಿವೃದ್ಧಿ, ಇಂಧನ ದಕ್ಷತೆ ಮತ್ತು ಪರಿಸರ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿದ ಯೋಜನೆಗಳಲ್ಲಿ ಭಾಗವಹಿಸುವವರು ಈ ಬಗ್ಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಖಜಾಂಚಿ ಶ್ರೀಶೈಲರಾಮಣ್ಣನವರ್, ಪ್ರಾಧ್ಯಾಪಕರಾದ ಜಿ.ಕೆ. ಸವ್ಯಸಾಚಿ, ಆರ್. ಅವಿನಾಶ್, ಗೋಪಾಲ್ ರೆಡ್ಡಿ, ಆರ್.ಪಿ.ಕಾರ್ತಿಕ್, ಎಂ.ಕೆ.ಭೂಷಿತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net