

ಮೈಸೂರು: ಪರಿಸರ ಕಾಳಜಿಯ ಜತೆಗೆ ಸುಸ್ಥಿರ ಅಭಿವೃದ್ಧಿಯು ಸಮಾಜಕ್ಕೆ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಪರಿಸರ ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ಲೋಕನಾಥ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು, ರೋಟರಿ ಕ್ಲಬ್ ಆಫ್ ಶ್ರೀಗಂಧ ಮೈಸೂರು ಇವರಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎರಡು ಸಾವಿರ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ, ಕರ್ತವ್ಯ ಹೊಂದಬೇಕು. ಪರಿಸರ ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ಸಾಗಬೇಕಿದ್ದು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ವಿವಿ ಆವರಣ ಮತ್ತಷ್ಟು ಹಸಿರು ವಾತಾವರಣವಾಗಲು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಪರಿಸರವನ್ನು ನಾವು ನಾಶ ಮಾಡುತ್ತ ಹೋದರೆ, ಮುಂದೊಂದು ದಿನ ಮನುಕುಲವೇ ನಾಶವಾಗುವ ಸಂದರ್ಭ ಎದುರಾಗಬಹುದಾಗಿದೆ. ಪರಿಸರವನ್ನು ತಾಯಿಯಂತೆ ಪೂಜಿಸಿ, ಮಗುವಿನಂತೆ ಪಾಲನೆ ಮಾಡಬೇಕು ಎನ್ನುವುದೇ ನಮ್ಮೆಲ್ಲರ ಆಶಯವಾಗಿದೆ ಎಂದರು.
ರೋಟರಿ ಜಿಲ್ಲಾ ಗವರ್ನರ್ ವಿಕ್ರಮದತ್ತ ಮಾತನಾಡಿ, ದೈನಂದಿನ ಜೀವನ ಶೈಲಿಯಲ್ಲಿ ಪರಿಸರ ಪೂರಕ ಕ್ರಮಗಳನ್ನು ಅಳವಡಿಸಿಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಪರಿಸರ, ಪ್ರತಿಯೊಂದು ಸಸಿ, ಗಿಡ-ಮರದ ಮಹತ್ವದ ಕುರಿತು ಅರಿವು ನೀಡಿದರಲ್ಲದೆ, ಸಸಿಗಳನ್ನು ನೆಟ್ಟು ಪೋಷಿಸಬೇಕು. ಸುಂದರ ಪರಿಸರವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ರೋಟರಿ ಸಂಸ್ಥೆಯ ಭೂಮಿ ಮತ್ತು ಹಸಿರು ಉಳಿಸಿ ವಿಭಾಗದ ಉಪಾಧ್ಯಕ್ಷ ಎನ್.ವೈ.ಚಿಗರಿ ಮಾತನಾಡಿ, ಪರಿಸರ ನಾಶದಿಂದ ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿದ್ದು, ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಸರವನ್ನು ಉಳಿಸಿ ಬೆಳೆಸುವಲ್ಲಿ ಅತ್ಯಂತ ಆಸಕ್ತಿ ವಹಿಸಬೇಕಿದೆ ಎಂದರು.
ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಅಧ್ಯಕ್ಷ ಆರ್.ರಾಜೇಶ್ ಅವರು ಇಂದು ಚಿನ್ನ-ಬೆಳ್ಳಿ, ಆಸ್ತಿಗೆ ನೀಡುವಂತಹ ಮಹತ್ವ ಪರಿಸರ ಸಂರಕ್ಷಣೆಗೆ ನೀಡದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಚಿನ್ನ, ಬೆಳ್ಳಿ ನಮಗೆ ಗಾಳಿ ಬೆಳಕು ನೀಡೊಲ್ಲ ಹಸಿರೇ ಉಸಿರು ಎಂಬುದು ಹಿಂದಿನಿಂದಲೂ ಚಾಲ್ತಿಯಲ್ಲಿರುವ ಮಾತಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮನುಕುಲ ತನ್ನ ಅತಿ ಆಸೆಗೆ ಪರಿಸರದ ಮೇಲೆ ದೌರ್ಜನ್ಯ ಎಸಗುತ್ತಿದ್ದು, ಇದನ್ನು ತಪ್ಪಿಸುವ ಕೆಲಸಕ್ಕೆ ನಾವೆಲ್ಲ ಮುಂದಾಗಬೇಕಿದೆ. ಪ್ರತಿಯೊಂದು ಮನೆಯ ಮುಂದೆ ಗಿಡ ನೆಟ್ಟು ಬೆಳೆಸುವ ಪ್ರವತ್ತಿಯನ್ನು ನಾವು ಬೆಳೆಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಹಸಿರು ಕ್ರಾಂತಿ ಎಂಬ ಬಿರುದಿನ ಶೀರ್ಷಿಕೆಯಡಿ ಮೈಸೂರು ವಿಶ್ವವಿದ್ಯಾಲಯ ಆವರಣದಲ್ಲಿ ಸುಮಾರು 2 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ಕೆ ಮುಂದಾಗಿದ್ದೇವೆ. ಟಿಕೆ.ಲೇಔಟ್‌ನ ಎಚ್.ಆರ್.ಲಕ್ಷ್ಮೀಸಾಗರ್ ಅವರಿಗೆ ಸೇರಿದ ಶಕ್ತಿನಾಯಕನಹಳ್ಳಿಯಲ್ಲಿರುವ ತೋಟದಲ್ಲಿ ಸುಮಾರು ಒಂದು ಸಾವಿರ ಶ್ರೀಗಂಧ ಸಸಿಗಳನ್ನು ನೆಡಲಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಡಾ.ಸಿ.ರಾಮಸ್ವಾಮಿ, ರೊಟರಿ ಕ್ಲಬ್ ಆಫ್ ಶ್ರೀಗಂಧದ ಅಧ್ಯಕ್ಷ ಎನ್.ಚಂದ್ರು, ಮೈಸೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಸುಷ್ಮಾ, ಮಾನಸ ಗಂಗೋತ್ರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ರಂಗರಾಜನ್, ರೋಟರಿ ಜಿಲ್ಲಾ ಕಾರ್ಯದರ್ಶಿ ಮೇಜರ್ ಡೋನರ್ ರಿತೇಶ್ ಬಳಿಗ, ವಲಯ 7ರ ಸಹಾಯಕ ಪ್ರಾಂತಪಾಲ ಕೆ.ಎ.ಪ್ರಹ್ಲಾದ್, ವಲಯ 8ರ ಸಹಾಯಕ ಪ್ರಾಂತಪಾಲ ಎಂ.ರಾಜೀವ್, ರೊಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಸಂಸ್ಥಾಪಕ ಅಧ್ಯಕ್ಷ ಕೆ.ಮಂಜುನಾಥ್, ಕಾರ್ಯದರ್ಶಿ ಬಿ.ಸಿ. ಸುಂದರರಾಜ, ಜಂಟಿ ಕಾರ್ಯದರ್ಶಿ ಮಧುಸೂಧನ್, ವಿವಿ ಎನ್‌ಎಸ್‌ಎಸ್ ಸಂಯೋಜಕ ಡಾ.ಎಂ.ಬಿ.ಸುರೇಶ್ ಇತರರು ಇದ್ದರು.