ಕೃಷಿಯಿಂದಲೂ ಸುಸ್ಥಿರ ಅಭಿವೃದ್ಧಿ ಸಾಧ್ಯ: ಸಚಿವ ಎನ್.ಚಲುವರಾಯಸ್ವಾಮಿ

mysore
Published on

ಮೈಸೂರು: ಕೃಷಿ ಲಾಭದಾಯಕ. ಇದರಲ್ಲೇ ಸುಸ್ಥಿರ ಅಭಿವೃದ್ಧಿ ಸಾಧ್ಯ. ಹೀಗಾಗಿ ರೈತರು ನಿರಾಶೆ ಆಗುವ ಅಗತ್ಯವೇ ಇಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.


ನಗರದ ಜೆ.ಕೆ. ಮೈದಾನದ ಅಮೃತ ಮಹೋತ್ಸವ ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ ಆಯೋಜಿಸಿದ್ದ ರೈತ ದಸರಾ ಉದ್ಘಾಟಿಸಿ ಮಾತನಾಡಿದರು.


ಕೃಷಿಯಲ್ಲೂ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಇದೆ. ಕೃಷಿಯನ್ನೂ ಲಾಭದಾಯಕವಾಗಿ ಪರಿವರ್ತನೆ ಮಾಡಬಹುದು. ರೈತರು ಸಹ ಸುಖಜೀವನ ನಡೆಸಬಹುದು. ಆದ್ದರಿಂದ ರೈತರು ಹತಾಶರಾಗುವುದು ಬೇಡ. ಸರ್ಕಾರ ರೈತರ ಪರ ಇದೆ ಎಂದರು.


ಕೃಷಿ, ತೋಟಗಾರಿಕೆ, ಮೀನು ಸಾಕಣೆ ಮತ್ತು ಪಶುಸಂಗೋಪನೆಯಲ್ಲಿ ಆಧುನಿಕ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು. ಎಷ್ಟು ಸಾಧ್ಯವೋ ಅಷ್ಟು ತಂತ್ರಜ್ಞಾನವನ್ನೂ ಬಳಸಿಕೊಳ್ಳಬೇಕು. ಪ್ರಗತಿಪರ ರೈತರೊಂದಿಗೆ ಸಂಪರ್ಕ ಇಟ್ಟುಕೊಂಡು ಅವರ ಸಲಹೆ ಪಡೆದುಕೊಳ್ಳಬೇಕು. ಇದರಿಂದ ರೈತರ ಪ್ರಗತಿ ಸಾಧ್ಯ ಎಂದರು.


ಅತಿವೃಷ್ಟಿ-ಅನಾವೃಷ್ಟಿ ನಮ್ಮ ಕೈಯಲ್ಲಿ ಇಲ್ಲ. ಆದರೆ ‘ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಮಳೆ ಆಗಲ್ಲ’ ಎಂಬ ಪ್ರತಿಪಕ್ಷಗಳ ಹೇಳಿಕೆ ಬಾಯಿಚಪಲದ ಮಾತು. ಈ ಸಲ ಉತ್ತಮ ಮಳೆಯಾಗಿದೆ. ಇವರ ಮಾತಿಗೆ ತಲೆಕೆಡಿಸಿಕೊಳ್ಳಬಾರದು ಎಂದು ಪ್ರತಿಪಕ್ಷಗಳ ಹೇಳಿಕೆಗೆ ತಿರುಗೇಟು ನೀಡಿದರು.
ಪಂಚ ಗ್ಯಾರಂಟಿ ಯೋಜನೆ ಕುರಿತು ಟೀಕೆ ಮಾಡಿದ್ದ ಪ್ರತಿಪಕ್ಷಗಳು ‘ಇದರ ಜಾರಿ ಸಾಧ್ಯವಿಲ್ಲ’ ಎಂದು ಹೇಳಿದ್ದವು. ಅದನ್ನು ಸಾಧ್ಯ ಮಾಡಿ ತೋರಿಸಿದ್ದೇವೆ. ಇದರ ಲಾಭ ಪಡೆದ ಫಲಾನುಭವಿಗಳು ಖುಷಿಯಲ್ಲಿಯೇ ಇದ್ದಾರೆ. ಆದಾಗ್ಯೂ ಅವರಿಗೆ ಸಮಾಧಾನ ಇಲ್ಲ ಎಂದು ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು.


ರೈತರು ದೇಶದ ಬೆನ್ನೆಲುಬು. ಅವರು ಅವಲಂಬಿಸಿರುವ ಕೃಷಿ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಕೃಷಿ ಬಜೆಟ್‌ನಲ್ಲಿ ಶೇ.99ರಷ್ಟು ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ. ಕೃಷಿ ಇಲಾಖೆ ವತಿಯಿಂದ ಕಳೆದ ಸಾಲಿನಲ್ಲಿ 1000 ಕೋಟಿ ರೂ. ವೆಚ್ಚದಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಮಾಡಲಾಗಿದೆ ಎಂದು ಕೃಷಿ ಸಚಿವರು ತಿಳಿಸಿದರು.

ಪ್ರತಿಪಕ್ಷದವರ ಹೊಟ್ಟೆನೋವಿಗೆ ಚುಚ್ಚುಮದ್ದು ಕೊಟ್ಟರೂ ಸರಿಯಾಗಲ್ಲ


ಫ್ರೂಟ್ಸ್ ತಂತ್ರಾಂಶದ ಮೂಲಕ ವಿವಿಧ ಇಲಾಖೆಗಳ ಸಹಾಯಧನವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ತಲುಪಿಸಲಾಗುತ್ತಿದೆ. ಮಧ್ಯವರ್ತಿ ಹಾವಳಿ ತಡೆಯಲಾಗಿದೆ. ಇದರಿಂದ ಕೃಷಿಕರು ತೃಪ್ತಿಯಾಗಿದ್ದಾರೆ. ಆದರೆ ಪ್ರತಿಪಕ್ಷಗಳಿಗೆ ತೃಪ್ತಿಯಾಗಿಲ್ಲ. ಅವರ ಹೊಟ್ಟೆನೋವಿಗೆ ಚುಚ್ಚುಮದ್ದು ಕೊಟ್ಟರೂ ಸರಿಯಾಗಲ್ಲ ಎಂದು ಕಾಲೆಳೆದರು.


ನಾಡಿನ ರೈತರು ನೆಮ್ಮದಿಯಾಗಿ ಇರಬೇಕು. ಆಗಲೇ ಸರ್ಕಾರಕ್ಕೆ ಕೃಷಿ, ರೈತರ ಪರ ಕೆಲಸ ಮಾಡಲು ಇನ್ನಷ್ಟು ಬಲ ಬರುತ್ತದೆ ಎಂದರು.
ರೈತರ ಜಾನುವಾರುಗಳಿಗೂ ವಿಮೆ ಸೌಲಭ್ಯ ಕಲ್ಪಿಸಲು ಬೇಡಿಕೆ ಇದೆ. ರೈತರು ಸಾಕಿರುವ ಹಳ್ಳಿಕಾರ್ ಎತ್ತುಗಳಿಗೆ 8 ರಿಂದ 10 ಲಕ್ಷ ರೂ. ಇದೆ. ಆಕಸ್ಮಿಕವಾಗಿ ಅವು ಮೃತಪಟ್ಟರೆ ರೈತರಿಗೆ ಆ ನಷ್ಟ ಭರಿಸಲಾಗುವುದಿಲ್ಲ. ಹೀಗಾಗಿ ವಿಮೆಯನ್ನು ಜಾರಿಗೆ ತರುವಂತೆ ಪಶುಸಂಗೋಪನಾ ಸಚಿವರಲ್ಲಿ ಮನವಿ ಮಾಡಿ ಸಿಎಂ ಅವರೊಂದಿಗೆ ಚರ್ಚಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.


ರೈತರಿಗೆ ಗ್ಯಾರಂಟಿ ಯೋಜನೆಗಳು ಸಹಕಾರಿ ಆಗಿದ್ದು, ಗ್ಯಾರಂಟಿಗಳನ್ನು ಇನ್ನೂ ಹೆಚ್ಚಿನ ರೈತರಿಗೆ, ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದರು.

ಸಣ್ಣ ರೈತರಿಗೆ ಅನುಕೂಲವಾಗುವಂತಹ ಯೋಜನೆ


ಪಶುಸಂಗೋಪನಾ, ರೇಷ್ಮೆ ಸಚಿವ ಕೆ.ವೆಂಕಟೇಶ್ ಮಾತನಾಡಿ, ರೈತರು ಆಧುನಿಕದ ತಂತ್ರಜ್ಞಾನ ಬಳಸಿಕೊಳ್ಳಬೇಕು. ಸಣ್ಣ ರೈತರಿಗೆ ಈ ರೀತಿಯ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಣ್ಣ ರೈತರಿಗೆ ಅನುಕೂಲವಾಗುವಂತಹ ಯೋಜನೆ ತರಬೇಕು. ಈ ಕುರಿತು ಸಿಎಂ ಅವರೊಂದಿಗೆ ಚರ್ಚಿಸಿ ಯೋಜನೆ ರೂಪಿಸಲಾಗುವುದು ಎಂದರು.


ಕೃಷಿ, ತೋಟಗಾರಿಕೆ, ರೇಷ್ಮೆ ಇನ್ನಿತರ ಕೃಷಿ ಸಂಬಂಧಿಸಿದ ರೈತರನ್ನು ಸನ್ಮಾನಿಸಲಾಯಿತು.

ಶಾಸಕ ಕೆ.ಹರೀಶ್‌ಗೌಡ, ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ರೈತರ ದಸರಾ ಉಪ ಸಮಿತಿಯ ಅಧ್ಯಕ್ಷ ಕರೀಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ಎಚ್.ರವಿ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net