

ಮಂಡ್ಯ: ದೇಶದಲ್ಲಿ ಶೇ.60ರಷ್ಟು ರೈತರಿದ್ದಾರೆ. ಇಷ್ಟು ಪ್ರಮಾಣದಲ್ಲಿದ್ದರೂ ಯಾವ ಕ್ಷೇತ್ರದಲ್ಲಿಯೂ ಲಾಭಿ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ಲಾಭಿ ಮಾಡಿಯಾದರೂ ಕೃಷಿ ಕ್ಷೇತ್ರದಲ್ಲಿ ನ್ಯಾಯ ಕೊಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅಭಿಪ್ರಾಯ ಪಟ್ಟರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸಮಗ್ರ ಸಾವಯವ ಸುಸ್ಥಿರ ಕೃಷಿ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಸಮಗ್ರ ಸಾವಯವ ಸುಸ್ಥಿರ ಕೃಷಿ ಜನ ಜಾಗೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಲಿಕ್ಕರ್‌ನಲ್ಲಿ ಬೆಲೆ ಏರಿಳಿತವಾದರೆ ಒಟ್ಟಾಗಿ ಹೋರಾಟ ಮಾಡುತ್ತಾರೆ. ಕಾಮಗಾರಿಗಳ ಗುತ್ತಿಗೆ ಸಿಗದೇ ಇದ್ದರೂ ಲಾಭಿ ಮಾಡಲಾಗುತ್ತದೆ. ಆದರೆ, ಕೃಷಿಕರು ಮಾತ್ರ ಲಾಭಿ ಮಾಡಿಲ್ಲ ಎಂದರು.
ಕೃಷಿಯಲ್ಲಿ ರೈತರಿಗೆ ಹಲವು ಸವಾಲುಗಳಿವೆ ಎಂಬುದಕ್ಕೆ ಮಂಡ್ಯ ಜಿಲ್ಲೆಯಲ್ಲಿ ಯೆಥೇಚ್ಚವಾಗಿ ಕಬ್ಬು ಬೆಳೆದರೂ ಅದಕ್ಕೆ ತಕ್ಕಂತೆ ಸಮರ್ಪಕ ಕಾರ್ಖಾನೆಗಳೇ ಇಲ್ಲ ಎನ್ನುವುದೇ ಸಾಕ್ಷಿ. ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಮಾಡಿದ್ದಾರೆ. ಆದರೆ ನಾವೇ ಕಾಮಗಾರಿ ಮಾಡಿದ್ದು ಎಂದು ರಾಜಕಾರಣಿಗಳು ಹೇಳುತ್ತಾರೆ. ಇಲ್ಲಿ ನಿಜವಾಗಿಯೂ ಕಾಮಗಾರಿ ಯಾರು ಮಾಡಿದ್ದಾರೆ ಎಂಬುದೇ ಮುಖ್ಯವಾಗುತ್ತದೆ. ಭೂಮಿ ಬರಡಾಗುತ್ತಿದೆ ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡಲು ಹೋರಾಟ ರೂಪಿಸುವ ಅಗತ್ಯವಿದೆ. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಏಳು ಫರ್ಟಿಲೈಸರ್ ಕಂಪನಿವನ್ನು ನನ್ನ ಅವಧಿಯಲ್ಲಿ ಮಾಡಲಾಯಿತು. ಅಲ್ಲಿನ ಗೋರಖ್‌ಪುರದಿಂದ ಹಿಡಿದು ಎಲ್ಲ ಕಡೆ ಮಾಡಲಾಗಿದೆ. ಫರ್ಟಿಲೈಸರ್‌ಗೆ ಇರುವ ಸಬ್ಸಿಡಿಯನ್ನು ಹೆಚ್ಚು ಮಾಡಲಾಯಿತು. ಆದರೆ ಇದಕ್ಕೆ ಬೇಕಿರುವ ಅಗತ್ಯ ವಸ್ತುಗಳೇ ಸಿಗುತ್ತಿಲ್ಲ. ಹಾಗಾಗಿ ವಿದೇಶದಿಂದ ಆಮದು ಮಾಡಲಾಗುತ್ತಿತ್ತು ಎಂದು ವಿವರಿಸಿದರು.
ನಗರ ಪ್ರದೇಶದಲ್ಲಿ ಕಾರ್ಖಾನೆಗಳು ಬೆಳೆಯುತ್ತಿವೆ. ಅದೇ ಗ್ರಾಮೀಣ ಭಾಗದಲ್ಲಿ ಕಾರ್ಖಾನೆಗಳ ನಿರ್ಮಾಣಕ್ಕೆ ಮಾತ್ರ ಯಾರೂ ಮನಸ್ಸು ಮಾಡಲಿಲ್ಲ. ಪರಿಣಾಮ ಕೈಗಾರಿಕೆ ಅಭಿವೃದ್ಧಿ ಸಾಧ್ಯವಾಗಿಲ್ಲ. ತೋಟಗಾರಿಕೆ ಬೆಳೆ ಸೇರಿದಂತೆ ಇತರೆ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿದೆ. ಇನ್ನುಳಿದಂತೆ ಯಾಂತ್ರೀಕೃತ ಬೇಸಾಯಕ್ಕೆ ಒತ್ತು ನೀಡುವಲ್ಲಿಯೂ ಹಿಂದೆ ಬಿದ್ದಿರುವ ಕಾರಣ ಸಣ್ಣಪುಟ್ಟ ಯಾಂತ್ರೀಕೃತ ಬೆಳೆ ಬೆಳೆಯುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್ ಮಾತನಾಡಿ, ರೈತರು ತಾವು ಕಟಾವು ಮಾಡಿದ ಭತ್ತ ಸಂಗ್ರಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಅದು ಇಲಿ ಹೆಗ್ಗಣಗಳ ಪಾಲಾಗುವ ಭೀತಿ ಇದೆ. ಈ ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆ ಮತ್ತು ಸರ್ಕಾರ ಗಮನಹರಿಸಿ ಕೂಡಲೇ ಖರೀದಿ ಕೇಂದ್ರಗಳ ಮೂಲಕ ಉತ್ತಮ ಬೆಲೆ ನೀಡಿ ಖರೀದಿ ಮಾಡಬೇಕು. ಜತೆಗೆ ಭತ್ತ ಕಟಾವು ಮಾಡಿದ ಸಂದರ್ಭದಲ್ಲಿಯೂ ದಲ್ಲಾಳಿಗಳ ಪಾಲಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬುದ್ಧ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಯಮದೂರು ಸಿದ್ದರಾಜು, ಮೈಕ್ರೋಭಿ ಪೌಂಡೇಷನ್ ಅಧ್ಯಕ್ಷ ಕೆ.ಆರ್.ಹುಲ್ಲು ನಾಚೇಗೌಡ, ಅಖಿಲ ಭಾರತೀಯ ಸಹ ಮಹಿಳಾ ಪ್ರಮುಖ್ ಬಿ.ಆರ್.ರಶ್ಮಿ, ರಾಜ್ಯ ವೈದ್ಯಕೀಯ ಪ್ರಕೋಷ್ಠದ ಸದಾನಂದ, ಟ್ರಸ್ಟ್ ಅಧ್ಯಕ್ಷ ಜೋಗೀಗೌಡ, ಸುಜಾತಮ್ಮ, ಪುಟ್ಟಮ್ಮ, ಸಿದ್ದರಾಮಯ್ಯ ಇತರರಿದ್ದರು. ಇದೇ ವೇಳೆ ಸಮಗ್ರ ಕೃಷಿಕ ರೈತರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಅಭಿಯಾನದ ಅಂಗವಾಗಿ ಸ್ವಾವಲಂಬಿ ಗ್ರಾಮದ ಪರಿಕಲ್ಪನೆ, ನೈಸರ್ಗಿಕ ಹಾಗೂ ಪಾರಂಪರಿಕ ಕೃಷಿ, ಸಮಗ್ರ ಕೃಷಿ ಹಾಗೂ ಮಣ್ಣು ಪುನರ್ ಚೇತನದ ಮಹತ್ವ, ದೇಶ ವಿದೇಶದಲ್ಲಿ ಸಾವಯವ ಆಹಾರ ಧಾನ್ಯಗಳ ಬೇಡಿಕೆ ವಿಷಯಗಳ ಕುರಿತು ಉಪನ್ಯಾಸ ನೀಡಲಾಯಿತು.