

ಮೈಸೂರು: ತಂತ್ರಜ್ಞಾನದ ಅರಿವಿನ ಕೊರತೆಯಿಂದಾಗಿ ಕಟ್ಟಡ ಕಾಮಗಾರಿಯಲ್ಲಿ ಸುಸ್ಥಿರತೆ ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂದು ದುಬೈನ ಪಿಇಸಿ ಸಂಸ್ಥೆಯ ವ್ಯವಸ್ಥಾಪನಾ ಪಾಲುದಾರ ಕಂದಸ್ವಾಮಿ ಅನ್ಬಳಗನ್ ಅಭಿಪ್ರಾಯಪಟ್ಟರು.
ನಗರದ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಡಿ.ವಿ. ನರಸಿಂಹರಾವ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಭಾರತದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಉದ್ಯಮ ದೊಡ್ಡದಾಗಿ ಬೆಳೆಯುತ್ತಿದೆ. ಆದರೆ ತಂತ್ರಜ್ಞಾನ ಸೇರಿದಂತೆ ನಿರ್ಮಾಣದ ಅರಿವಿನ ಕೊರತೆ ಹೆಚ್ಚಾಗಿರುವುದರಿಂದ ಸುಸ್ಥಿರತೆಯು ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ ಎಂದು ಹೇಳಿದರು.
ಭಾರತದ ಕಾಮಗಾರಿ ಉದ್ಯಮದಲ್ಲಿ ಹೆಚ್ಚಾಗಿ ಕಟ್ಟಡ ನಿರ್ಮಾಣ ಕೆಲಸ ಇದೆ. ಆದರೆ ಇಲ್ಲಿ ಕಟ್ಟಡ ನಿರ್ಮಾಣದ ಹೊಣೆ ಹೊತ್ತುಕೊಂಡಿರುವ ಗುತ್ತಿಗೆದಾರ, ಕಟ್ಟಡದ ಕೆಲಸ ಮಾಡುವ ಕಾರ್ಮಿಕ ಅಲ್ಲದೇ ಕಟ್ಟಡ ಕಟ್ಟಿಸುವ ಮಾಲೀಕರಿಗೂ ಕೂಡಾ ಕಟ್ಟಡದ ಪೂರ್ಣ ವಿನ್ಯಾಸದ ಅರಿವು ಇರುವುದಿಲ್ಲ ಎಂದರು.
ಕಟ್ಟುವಾಗ ಒಂದು ಯೋಜನೆ ಇರುತ್ತದೆ. ಮುಗಿಯುವ ಹೊತ್ತಿಗೆ ಮತ್ತೊಂದು ಆಗಿರುತ್ತದೆ. ಇದರಿಂದ ಸುಸ್ಥಿರತೆ ನಿರೀಕ್ಷೆ ಮಾಡಲು ಹೇಗೆ ಸಾಧ್ಯ? ದೇಶದಲ್ಲಿ ಗುತ್ತಿಗೆದಾರರನ್ನು ವರ್ಗಗಳಾಗಿ ವಿಂಗಡಿಸಿರುವುದು ಮತ್ತಷ್ಟು ಸಮಸ್ಯೆಯನ್ನು ತಂದೊಡ್ಡಲು ಕಾರಣವಾಗಿದೆ. ದೊಡ್ಡ-ದೊಡ್ಡ ಅಪಾರ್ಟ್‌ಮೆಂಟ್, ಫೈವ್‌ಸ್ಟಾರ್ ಹೋಟೆಲ್‌ಗಳನ್ನು ಮೊದಲ ದರ್ಜೆಯ ಗುತ್ತಿಗೆದಾರರು, ಬಿಲ್ಡರ್‌ಗಳು ನಿರ್ಮಾಣ ಮಾಡುತ್ತಾರೆ. ಆದರೆ ಅದೇ ಬಿಲ್ಡಿಂಗ್‌ನ ಸ್ವಚ್ಛತಾ ವಲಯದ ಕೆಲಸವನ್ನು ಮೂರನೇ ಅಥವಾ ನಾಲ್ಕನೆ ದರ್ಜೆಯ ಗುತ್ತಿಗೆದಾರರಿಗೆ ವಹಿಸಿಬಿಡುತ್ತಾರೆ. ಇದರಿಂದ ನಿರ್ಮಾಣದಲ್ಲಿ ಒಂದೇ ತರಹದ ಗುಣಮಟ್ಟ ಹಾಗೂ ವಿನ್ಯಾಸ ಬರುವುದಿಲ್ಲ ಎಂದು ವಿವರಿಸಿದರು.
ತಾಪಮಾನ ಕಡಿಮೆಯಾಗದು:
ಮೊದಲು ಈ ರೀತಿಯ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳದಿದ್ದರೆ ಪರಿಸರ ಸಂರಕ್ಷಣೆ ಹಾಗೂ ತಾಪಮಾನ ಕಡಿಮೆ ಮಾಡಲು ಸರ್ಕಾರ ರೂಪಿಸಿರುವ ಗುರಿಗಳನ್ನು ಮುಟ್ಟಲು ಸಾಧ್ಯವೇ ಇಲ್ಲ ಎಂದು ಕಂದಸ್ವಾಮಿ ಅನ್ಬಳಗನ್ ಎಚ್ಚರಿಸಿದರು.
ಸಿಂಗಾಪುರ, ಸಂಯುಕ್ತ ಅರಬ್ ಎಮಿರೆಟ್ಸ್ ನಲ್ಲಿ ಕಟ್ಟಡಗಳ ನಿರ್ಮಾಣ ಪ್ರಾರಂಭಿಸುವ ಮೊದಲೇ ಪರಿಪೂರ್ಣ ಯೋಜನೆ, ನಕಾಶೆ, ಕಾಮಗಾರಿ ಮುಗಿಯುವ ಅವಧಿ, ಹಸ್ತಾಂತರ ಮಾಡುವ ದಿನ ಎಲ್ಲವೂ ನಿಗದಿಯಾಗಿರುತ್ತದೆ. ಅದೇ ರೀತಿ ನಡೆಯುತ್ತದೆ. ಆದರೆ ನಮ್ಮ ದೇಶದಲ್ಲಿ ಕಟ್ಟಡ ಪ್ರಾರಂಭಿಸಲು ಹತ್ತಾರು ಇಲಾಖೆಗಳಲ್ಲಿ ದಾಖಲೆಗಳನ್ನು ಪಡೆಯಬೇಕು. ಎರಡು ವರ್ಷ-ಮೂರು ವರ್ಷದಲ್ಲಿ ಮುಗಿಯುತ್ತದೆ ಎಂದುಕೊಂಡ ಕಾಮಗಾರಿ ಹಲವು ವರ್ಷವಾದರೂ ಮುಗಿಯುವುದೇ ಇಲ್ಲ. ಇಂತಹ ತೊಡಕುಗಳಿಂದ ಸುಸ್ಥಿರತೆ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ವಿವರಿಸಿದರು.
ಇಂಜಿನಿಯರುಗಳ ಸಂಸ್ಥೆ ಅಧ್ಯಕ್ಷ ಡಾ.ಆರ್.ದೀಪು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ.ಎಸ್.ಎ. ಮೋಹನ್ ಕೃಷ್ಣ, ಕಾರ್ಯಕ್ರಮ ಸಂಯೋಜಕ ಕೆ.ಬಿ.ಭಾಸ್ಕರ್, ಡಿವಿಎನ್ ಸ್ಮಾರಕ ಟ್ರಸ್ಟ್‌ನ ಪ್ರೊ. ಡಿ.ಎಸ್.ರಾಮಕೃಷ್ಣರಾವ್ ಇತರರು ಇದ್ದರು.