ವಿದ್ಯಾರ್ಥಿಯ ಅನುಮಾನಾಸ್ಪದ ಸಾವು

HUN-FEB-20-4(MUTTURAJ)
ಮುತ್ತುರಾಜ್
Published on

ಹುಣಸೂರು: ತಾಲೂಕಿನ ಬಿಳಕೆರೆ ಹೋಬಳಿ ದಾಸನಪುರ ಗ್ರಾಮದ ವಿದ್ಯಾರ್ಥಿಯೊಬ್ಬರು ಅನುಮಾನಾಸ್ಪದವಾಗಿ ಮರಣ ಹೊಂದಿದ್ದಾರೆ. ವಿದ್ಯಾರ್ಥಿಯನ್ನು ಕೊಲೆ ಮಾಡಲಾಗಿದ್ದು, ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಯ ಸಂಬಂಧಿಕರು ಒಂದು ಗಂಟೆಗೂ ಹೆಚ್ಚು ಕಾಲ ಗ್ರಾಮಾಂತರ ಠಾಣೆಯ ಮುಂಭಾಗ ವಾಹನಗಳ ಸಂಚಾರ ತಡೆದು ಪ್ರತಿಭಟಿಸಿದರು.

ದಾಸನಪುರ ಗ್ರಾಮದ ರವಿಕುಮಾರ್-ವಸಂತ ದಂಪತಿ ಪುತ್ರ ಮುತ್ತುರಾಜ್(17) ಮೃತಪಟ್ಟವನು. ಈತ ರತ್ನಪುರಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯು ವ್ಯಾಸಂಗ ಮಾಡುತ್ತಿದ್ದ.

ಮುತ್ತುರಾಜ್ ಸೋಮವಾರ ಕಾಲೇಜಿನಲ್ಲಿ ಪರೀಕ್ಷೆ ಬರೆದು ತನ್ನೂರಿಗೆ ವಾಪಸ್ಸಾಗುವ ವೇಳೆ ಅನ್ಯಕೋಮಿನ ಹುಡುಗರ ಒಂದು ತಂಡ ರತ್ನಪುರಿಯಿಂದ ಗದ್ದಿಗೆಗೆ ತೆರಳುವ ಮಾರ್ಗದಲ್ಲಿ ಅಡ್ಡಹಾಕಿ ಮನಬಂದಂತೆ ಥಳಿಸಿದೆ. ಇದನ್ನು ಕಂಡ ಇತರ ಗೆಳೆಯರು ಮುತ್ತುರಾಜನ ತಂದೆಗೆ ಮಾಹಿತಿ ನೀಡಿದ್ದಾರೆ. ತಂದೆ ರವಿಕುಮಾರ್ ರತ್ನಪುರಿಗೆ ಬಂದು ಅನ್ಯಕೋಮಿನ ಹುಡುಗರನ್ನು ಪ್ರಶ್ನಿಸಿದಾಗ ಒರಟಾಗಿ ಉತ್ತರ ನೀಡಿ ತಮ್ಮ ಬಳಿಯಿದ್ದ ಮುತ್ತುರಾಜನ ಮೊಬೈಲ್‌ನ್ನು ನೆಲಕ್ಕೆ ಬಿಸಾಡಿ ತೆರಳಿದ್ದಾರೆ. ಸಂಜೆಯವರೆಗೂ ತನ್ನ ಪುತ್ರನಿಗಾಗಿ ಹುಡುಕಾಡಿದ ರವಿಕುಮಾರ್ ದಾಸನಪುರದ ತಮ್ಮ ಜಮೀನಿನ ಪಕ್ಕದಲ್ಲಿರುವ ಶೆಡ್‌ಗೆ ಹೋಗಿ ನೋಡಿದಾಗ ಪುತ್ರನ ದೇಹ ನೇಣಿಗೆ ಶರಣಾದ ಸ್ಥಿತಿಯಲ್ಲಿ ನೇತಾಡುತ್ತಿತ್ತು.

ಠಾಣೆಯ ಮುಂಭಾಗ ಹೈಡ್ರಾಮಾ: ಮೃತನ ತಂದೆ ರವಿಕುಮಾರ್ ತಡರಾತ್ರಿ ಗ್ರಾಮಾಂತರ ಠಾಣೆಗೆ ಬಂದು ದೂರು ನೀಡಿ ತನ್ನ ಮಗನ ಸಾವು ಅನುಮಾನಾಸ್ಪದವಾಗಿದ್ದು ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕೆಂದು ಕೋರಿದ್ದಾರೆ. ಆದರಂತೆ ಪೊಲೀಸರು ಪ್ರಕರಣ ದಾಖಲಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ಮಂಗಳವಾರ ಸಂಜೆಯಾದರೂ ಯಾರೊಬ್ಬರನ್ನೂ ಬಂಧಿಸಲಿಲ್ಲವೆಂದು ಆಕ್ರೋಶಗೊಂಡ ಗ್ರಾಮಸ್ಥರು ನಗರದ ಗ್ರಾಮಾಂತರ ಠಾಣೆಯ ಮುಂಭಾಗ ಸಂಜೆ ಜಮಾವಣೆಗೊಂಡು ನ್ಯಾಯಕ್ಕಾಗಿ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಮರಣೋತ್ತರ ಪರೀಕ್ಷೆಗಾಗಿ ಮೈಸೂರಿಗೆ ತೆಗೆದುಕೊಂಡು ಹೋಗಲಾಗಿದ್ದ ವಿದ್ಯಾರ್ಥಿಯ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಠಾಣೆ ಬಳಿ ತರಲಾಯಿತು. ಇದರಿಂದ ದುಃಖಿತರಾಗಿದ್ದ ಗ್ರಾಮಸ್ಥರು ವಾಹನದ ಸುತ್ತ ರಸ್ತೆಯ ಮೇಲೆಯೇ ಕುಳಿತು ಪ್ರತಿಭಟನೆ ಆರಂಭಿಸಿದರು.

ಡಿವೈಎಸ್‌ಪಿ ಗೋಪಾಲಕೃಷ್ಣ ನೇತೃತ್ವದಲ್ಲಿ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆರೋಪಿಯನ್ನು ಬಂಧಿಸುವವರೆಗೂ ಇಲ್ಲಿಂದ ಕದಲುವುದಿಲ್ಲವೆಂದು ಗ್ರಾಮಸ್ಥರು ಪಟ್ಟುಹಿಡಿದರು. ತದನಂತರ ಹಿಂದುಪರ ಸಂಘಟನೆಗಳ ಕೆಲ ಕಾರ್ಯಕರ್ತರು ಮತ್ತೊಂದು ದೂರು ನೀಡಿ, 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದರು. ದೂರನ್ನು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುವುದಾಗಿ ತಿಳಿಸಿದ ನಂತರ ಪರಿಸ್ಥಿತಿ ತಿಳಿಯಾಯಿತು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.

ಸ್ಥಳದಲ್ಲಿ ಡಿವೈಎಸ್‌ಪಿ ಗೋಪಾಲಕೃಷ್ಣ, ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಬಿ.ಚಿನ್ನಸ್ವಾಮಿ ಶೆಟ್ಟಿ, ನಗರ ಠಾಣೆ ಇನ್ಸ್‌ಪೆಕ್ಟರ್ ದೇವೇಂದ್ರಪ್ಪ ಮತ್ತು ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net