ಅಮಾನತು ಆದೇಶ ಹಿಂಪಡೆಯಿರಿ

26SND-06
Published on

ಸಿಂಧನೂರು: ತಾಲೂಕು ಆಡಳಿತಸೌಧ ಮುಂದೆ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು. ಕಪ್ಪು ಪಟ್ಟಿ ಧರಿಸಿದ್ದ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಮೊಬೈಲ್ ತಂತ್ರಾಂಶಕ್ಕೆ ಸಂಬಂಧಿಸಿದಂತೆ ಇದುವರೆಗೆ ಆಗಿರುವ ಎಲ್ಲ ಅಮಾನತು ಆದೇಶಗಳನ್ನು ಹಿಂಪಡೆಯಬೇಕು. ಕೆಸಿಎಸ್‌ಆರ್ ನಿಯಮಾವಳಿಯಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕಬಾರದು. ಅಂತರ ಜಿಲ್ಲಾ ಹಾಗೂ ಪತಿ-ಪತ್ನಿ ಪ್ರಕರಣಗಳ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಅಂತಿಮ ಆದೇಶಕ್ಕಾಗಿ ಬಾಕಿ ಇರುವ ವರ್ಗಾವಣೆಗಳ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

ಅಂಗವಿಕಲ, ಅನಿವಾರ್ಯ ಹಾಗೂ ಆರೋಗ್ಯದ ಸಮಸ್ಯೆ ಇರುವ ವರ್ಗಾವಣೆ ಪ್ರಕರಣಗಳನ್ನು ಕೌನ್ಸೆಲಿಂಗ್ ಮೂಲಕ ನಿಯೋಜನೆಗೆ ಆದೇಶಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳು ಪದೋನ್ನತಿ ವಂಚಿತರಾಗುತ್ತಿದ್ದಾರೆ. 30 ವರ್ಷಗಳ ಸೇವಾವಧಿ ಬಳಿಕ ನಿವೃತ್ತಿ ಅಂಚಿನಲ್ಲಿ ಪದೋನ್ನತಿ ನೀಡಲಾಗುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿನ 1196 ಗ್ರೇಡ್-1 ಗ್ರಾಪಂ ಹಾಗೂ 304 ಕಸಬಾ ಹೋಬಳಿ ವೃತ್ತಗಳನ್ನು ಗ್ರೇಡ್-1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ರಾಜಸ್ವ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕ/ಗ್ರೇಡ್-1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಪರಿಷ್ಕರಿಸಿ ಮೇಲ್ದರ್ಜೆಗೇರಿಸಿ ಪದೋನ್ನತಿ ನೀಡಬೇಕೆಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net