

ಮುಂಡಗೋಡ: ಕರ್ತವ್ಯ ಲೋಪದಡಿಯಲ್ಲಿ ಸರ್ಕಾರಿ ಮರಮಟ್ಟು ಸಂಗ್ರಹಾಲಯದ (ಕಟ್ಟಿಗೆ ಡಿಪೋ)ಆರ್ ಎಫ್‌ಒ ಜಿ.ಟಿ. ರೇವಣಕರ ಹಾಗೂ ಐವರು ಉಪವಲಯ ಅರಣ್ಯಾಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿ ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ವಸಂತ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಜೂ. 9ರಂದು ಶಿರಸಿ ತಾಲೂಕಿನ ಎಕ್ಕಂಬಿ ಚೆಕ್‌ಪೋಸ್ಟ್ ನಲ್ಲಿ ಎರಡು ಲಾರಿಯಲ್ಲಿ ವಿವಿಧ ಜಾತಿಯ ನಾಟಾಗಳ ಮಧ್ಯೆ 22 ಅನಧಿಕೃತ ಸಾಗವಾನಿ ನಾಟಾಗಳು ಪತ್ತೆಯಾಗಿದ್ದವು.
ಈ ನಾಟಾಗಳು ಪಟ್ಟಣದ ಕಟ್ಟಿಗೆ ಡಿಪೋದಿಂದ ಹೋಗಿದ್ದವು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ. ಹೆಗಡೆ ಅವರ ವರದಿಯನ್ವಯ ಇಲ್ಲಿನ ಉಪವಲಯ ಅರಣ್ಯಾಧಿಕಾರಿಗಳ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಸುರೇಶ ವಡ್ಡರ, ಮಾರುತಿ ಸೋರಗಾಂವಿ, ಮಹೇಶ ಬೋರಕರ್, ಹನಮಂತ ಬಡ್ಡಿವಡ್ಡರ, ಗುರುಚಂದ್ರ ಬ್ಯಾಳಿಯವರ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಲಾರಿ ಮಾಲೀಕರ ಪ್ರತಿಭಟನೆ: ನಾಟಾ ಸಾಗಿಸಲು ಬಳಸಲಾದ ಎರಡು ಲಾರಿಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದ್ದು, ಇದನ್ನು ವಿರೋಧಿಸಿ ಲಾರಿ ಮಾಲೀಕರು ಬುಧವಾರ ಪ್ರತಿಭಟನೆ ನಡೆಸಿದರು. ಪರವಾನಗಿ ಇರುವ ಕಟ್ಟಿಗೆ ಸಾಗಾಟಕ್ಕೆಂದು ಹೇಳಿ ಲಾರಿ ಬಾಡಿಗೆ ಪಡೆಯಲಾಗಿತ್ತು. ಅಕ್ರಮ ಸಾಗಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಇದೀಗ ನಮ್ಮ ಲಾರಿಗಳನ್ನು ಸೀಜ್ ಮಾಡಿರುವುದರಿಂದ ತುಂಬ ತೊಂದರೆಯಾಗಿದೆ. ಕೂಡಲೇ ನಮ್ಮ ಲಾರಿಗಳನ್ನು ಬಿಡಬೇಕು ಎಂದು ಲಾರಿ ಮಾಲೀಕರು ಹಾಗೂ ಚಾಲಕರ ಸಂಘದವರು ಮರಮಟ್ಟು ಸಂಗ್ರಹಾಲಯ ಕಚೇರಿ ಎದುರು ಕೆಲ ಸಮಯ ಪ್ರತಿಭಟನೆ ನಡೆಸಿದರು.