

ಮದ್ದೂರು: ಇ-ಆಫೀಸ್ ತಂತ್ರಾಂಶ ಅನುಷ್ಠಾನದ ಬಗ್ಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ತಾಲೂಕು ಕಚೇರಿಯ ಶಿರಸ್ತೇದಾರ್ ಎನ್.ಚಂದ್ರಶೇಖರ್ ಅವರನ್ನು ಅಮಾನತುಗಳಿಸಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಚ್.ಎಂ.ಸುದರ್ಶನ್ ಆದೇಶ ಹೊರಡಿಸಿದ್ದಾರೆ.
ಜ.17ರಂದು ಕಚೇರಿಗೆ ಭೇಟಿ ನೀಡಿದ ಸಚಿವರಿಗೆ ತಪ್ಪು ಮಾಹಿತಿ ನೀಡುವುದರ ಜತೆಗೆ ಇ-ಕಚೇರಿ ತಂತ್ರಾಂಶವನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತರಲು ಯಾವುದೇ ಕ್ರಮ ವಹಿಸಿಲ್ಲ. ಜತೆಗೆ ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೂ ತಾರದೇ ಕರ್ತವ್ಯದಲ್ಲಿ ಬೇಜವಾಬ್ದಾರಿತನ ತೋರಿದ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅನುಮಾನಗೊಳಿಸಿ ಜ.24ರಂದು ಆದೇಶಿಸಿದ್ದಾರೆ. ಜತೆಗೆ ಈ ಹುದ್ದೆಯ ಹಕ್ಕಿನ ಸ್ಥಾನವನ್ನು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕು ಕಚೇರಿಯ ಶಿರಸ್ತೇದಾರ್ ಅವರಿಗೆ ವರ್ಗಾಯಿಸಲಾಗಿದೆ.
ಕೃಷ್ಣ ಭೈರೇಗೌಡ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಇ-ಆಫೀಸ್ ತಂತ್ರಾಂಶದ ಬಗ್ಗೆ ಪರಿಶೀಲಿಸಿದ್ದರು. 1008 ಕಡತದಲ್ಲಿ 603 ಮಾತ್ರ ವಿಲೇವಾರಿ ಮಾಡಿರುವುದರು ಕಂಡುಬಂದಿತ್ತು. ಆದಾಗ್ಯೂ ಮಾಹಿತಿ ಕೇಳಿದಾಗ ಇ-ಆಫೀಸ್ ತಂತ್ರಾಂಶವನ್ನು ಪರಿಪೂರ್ಣವಾಗಿ ಅಳವಡಿಸಲಾಗಿದೆ ಎಂದು ಎನ್.ಚಂದ್ರಶೇಖರ್ ತಿಳಿಸಿದ್ದರು. ಆದರೆ ಈ ಬಗ್ಗೆ ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿಯಲ್ಲಿ, ಮದ್ದೂರು ತಾಲೂಕು ಕಚೇರಿಯಲ್ಲಿ ಪೂರ್ಣ ಪ್ರಮಾಣದ ಇ-ಆಫೀಸ್ ತಂತ್ರಾಂಶವನ್ನು ಅನುಷ್ಠಾನಗೊಳಿಸಿರುವುದಾಗಿ ಸುಳ್ಳು ಮಾಡಿದ್ದಾರೆ. ಇದು ತಾಲೂಕು ಆಡಳಿತದ ಮೇಲೆ ಅಸಮಾಧಾನ ಉಂಟಾಗಲು ಹಾಗೂ ಸ್ವೇಚ್ಛಾಚಾರದ ಮನೋಭಾವ, ನಿರ್ಲಕ್ಷೃ ಕಾರ್ಯವೈಖರಿಯನ್ನು ತೋರಿಸುತ್ತದೆ. ಆದ್ದರಿಂದ ಎನ್.ಚಂದ್ರಶೇಖರ್ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದರು. ಅದರಂತೆ ಅಮಾನತುಗೊಳಿಸಿ ಆದೇಶ ನೀಡಲಾಗಿದೆ.