ಮರಳು ಮಾಫಿಯಾದೊಂದಿಗೆ ನಂಟು ಹೊಂದಿದ್ದ ಏಳು ಮಂದಿ ಪೊಲೀಸರು ಅಮಾನತು

Published on

ಕಾಸರಗೋಡು: ಮರಳು ಅಕ್ರಮ ಸಾಗಾಟಕ್ಕೆ ಸಹಕಾರ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಇಬ್ಬರು ಸೇರಿದಂತೆ ಏಳು ಮಂದಿ ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಚಂದೇರ ಪೊಲೀಸ್ ಠಾಣೆಯ ಟಿ.ಎಂ ಅಬ್ದುಲ್ ರಶೀದ್ ಮತ್ತು ಚೀಮೇನಿ ಠಾಣೆಯ ಬಿ.ಹರಿಕೃಷ್ಣನ್, ಕಣ್ಣೂರು ರೂರಲ್ ಠಾಣೆಯ ಗ್ರೇಡ್ ಎಸ್‌ಐ ಸಿ.ಗೋಕುಲನ್ ಸೇರಿದಂತೆ ಏಳು ಮಂದಿ ಅಮಾನತುಗೊಂಡಿದ್ದಾರೆ. ಈ ಏಳೂ ಮಂದಿ ಈ ಹಿಂದೆ ತೃಶ್ಯೂರ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ಅಲ್ಲಿನ ಮರಳು ಮಾಫಿಯಾದೊಂದಿಗೆ ಕೈಜೋಡಿಸಿದ ಆರೋಪ ಎದುರಾಗಿತ್ತು. ನಂತರ ಅವರನ್ನು ರಾಜ್ಯದ ವಿವಿಧ ಠಾಣೆಗಳಿಗೆ ವರ್ಗಾಯಿಸಲಾಗಿತ್ತು. ಇಲಾಖಾ ಮಟ್ಟದಲ್ಲಿ ನಡೆದ ವಿಚಾರಣೆ ಸಂದರ್ಭ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ. ಕಾಸರಗೋಡು ಜಿಲ್ಲೆಯ ಇನ್ನೂ ಐವರು ಪೊಲೀಸರು ಮಾಫಿಯಾ ತಂಡಗಳೊಂದಿಗೆ ಸಂಪರ್ಕ ಹೊಂದಿರುವುದನ್ನು ತನಿಖಾ ಇಲಾಖೆ ಪತ್ತೆಹಚ್ಚಿದ್ದು, ಅವರ ವಿರುದ್ಧವೂ ಕ್ರಮಕೈಗೊಳ್ಳುವ ಸಾಧ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net