ಸಂಸದರ ಅಮಾನತು ಸರ್ವಾಧಿಕಾರಿ ಧೋರಣೆ

protest
Published on

ಮೈಸೂರು: ದಾಖಲೆ ಪ್ರಮಾಣದ ಸಂಸದರನ್ನು ಸಂಸತ್ತಿನಿಂದ ಅಮಾನತುಗೊಳಿಸುವ ಮೂಲಕ ಸರ್ವಾಧಿಕಾರಿ ಧೋರಣೆಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ಮುಂದಿನ ವರ್ಷಗಳಲ್ಲಿ ಬಿಜೆಪಿ ಆಡಳಿತ ನಡೆಸಿ ಸಂವಿಧಾನವನ್ನು ಕಿತ್ತು ಬಿಸಾಕಲಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್ ಹೇಳಿದರು.

ಸಂಸತ್ ಪ್ರವೇಶಿಸಿ ದಾಂಧಲೆ ನಡೆಸಿದ ಘಟನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಮೌನ ವಹಿಸಿರುವುದು ಸರಿಯಲ್ಲ. ಆ ಪ್ರಕರಣವನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಆದರೆ, ಬಿಜೆಪಿ ಸಂವಿಧಾನದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಸಂಸತ್‌ಗೆ ನುಗ್ಗಿದ ಘಟನೆ ಭದ್ರತಾ ವೈಫಲ್ಯಕ್ಕೆ ಹಿಡಿದ ಕನ್ನಡಿ. ಆದರೆ, ಇಂತಹ ಗಂಭೀರ ವಿಚಾರದ ಬಗ್ಗೆ ನರೇಂದ್ರ ಮೋದಿ ಮತ್ತು ಅಮಿತ್ ಷಾ ಮೌನ ವಹಿಸಿದ್ದಾರೆ. ಭದ್ರತಾ ಲೋಪದ ಬಗ್ಗೆ ಇಂಡಿಯಾ ಒಕ್ಕೂಟದ ಸಂಸದರು ಪ್ರಶ್ನೆ ಎತ್ತಿದರೂ ಪ್ರಧಾನಿ, ಗೃಹ ಸಚಿವರು ಬಾಯಿ ತೆರೆಯುತ್ತಿಲ್ಲ. ಮನಮೋಹನ್‌ಸಿಂಗ್ ಅವರನ್ನು ಮೌನಿಯೆಂದು ನಿಂದಿಸುತ್ತಾರೆ. ಆದರೆ, ನಿಜವಾದ ಮೌನಿ ಪ್ರಧಾನಿ ನರೇಂದ್ರ ಮೋದಿ ಎಂದು ಟೀಕಿಸಿದರು.
ಪ್ರಕರಣದ ತನಿಖೆಗೆ ಲೋಕಸಭೆಯ ಸ್ಪೀಕರ್ ಪತ್ರದ ಮೂಲಕ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶ ಹೊರಡಿಸಿದ್ದಾರೆ. ಗೃಹ ಇಲಾಖೆ ಅಧಿಕಾರಿಗಳು ದೆಹಲಿ ಪೊಲೀಸ್ ಕಮಿಷನರ್‌ಗೆ ಆದೇಶಿಸಿದ್ದಾರೆ. ಆದರೆ, ಗೃಹ ಸಚಿವ ಅಮಿತ್ ಷಾ ಭದ್ರತಾ ಲೋಪದ ಬಗ್ಗೆ ಸಂಸತ್ತಿನಲ್ಲಿ ಸ್ಪಷ್ಟಪಡಿಸಿ ಗೃಹ ಇಲಾಖೆಗೆ ಆದೇಶ ನೀಡಬೇಕಿತ್ತು ಎಂದರು.

ಪ್ರಕರಣ ಸೇರಿದಂತೆ ಭದ್ರತಾ ವೈಫಲ್ಯವನ್ನು ಇಂಡಿಯಾ ಒಕ್ಕೂಟದ ಪಕ್ಷಗಳು ಪ್ರಶ್ನಿಸಿದರೆ, ಭದ್ರತಾ ವಿಚಾರದಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ ಎಂಬ ಹೇಳಿಕೆ ನೀಡುವ ಮೂಲಕ ವಿಷಯಾಂತರ ಮಾಡಿ ದಿಕ್ಕು ತಪ್ಪಿಸಲಾಗುತ್ತಿದೆ. ಇದೊಂದು ರಾಜಕೀಯ ಮೂರ್ಖತನ, ಮೌಢ್ಯತನ. ಎಲ್ಲವೂ ರಾಜಕೀಯವೇ. ದೇಶದ ಸೈನಿಕರು ನಡೆಸಿದ ಯಶಸ್ವಿ ಕಾರ್ಯಾಚರಣೆಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಪಡೆಯುತ್ತಾರೆ. ಆದರೆ, ಈ ಪ್ರಕರಣವನ್ನು ರಾಜಕೀಯ ಎನ್ನುತ್ತಾರೆ ಎಂದು ಜರಿದರು.

ಮೈಸೂರು ವಿಮಾನ ನಿಲ್ದಾಣಕ್ಕೆ ಹೆಸರಿಡುವ ವಿಚಾರದಲ್ಲಿ ಟಿಪ್ಪು ವರ್ಸಸ್ ಅರಸು ಎಂಬಂತೆ ಬಿಂಬಿಸುವುದು ತಪ್ಪು. ಮೈಸೂರು ಸಂಸ್ಥಾನದ ರಾಜರು ನಾಡಿಗೆ ಅಪಾರ ಕೊಡುಗೆ ನೀಡಿರುವುದನ್ನು ಸ್ಮರಿಸಬೇಕು. ವೈಯಕ್ತಿಕವಾಗಿ ನಾನು ಟಿಪ್ಪು ಅಭಿಮಾನಿ. ಆದರೆ ಈ ವಿಚಾರದಲ್ಲಿ ವಿರೋಧ ಮಾಡುವುದನ್ನು ಬಿಡಬೇಕು ಎಂದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮಾಧ್ಯಮ ವಕ್ತಾರ ಕೆ.ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net