

ವಿರೋಧ ಪಕ್ಷದ ಹತ್ತು ಶಾಸಕರನ್ನು ಅಮಾನತುಗೊಳಿಸಿರುವ ಕಾಂಗ್ರೆಸ್ ಸರ್ಕಾರದ ನಡೆ ಸಂವಿಧಾನ ಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿ ಎಂದು ಬಿಜೆಪಿ ನಗರ ಮಾಧ್ಯಮ ವಕ್ತಾರ ಎಂ.ಮೋಹನ್ ಕಿಡಿಕಾರಿದರು.
ಇಂತಹ ಕೃತ್ಯಗಳಿಗೆ ಪ್ರಸಿದ್ಧಿಯಾಗಿರುವುದು ಕಾಂಗ್ರೆಸ್. ಬೆಂಗಳೂರಿನಲ್ಲಿ ರಾಷ್ಟ್ರದ ವಿವಿಧ ಪಕ್ಷಗಳನ್ನು ಒಗ್ಗೂಡಿಸುವ ನಾಟಕ ಮಾಡಿ ಇದಕ್ಕೆ ಹಿರಿಯ ಐಎಎಸ್ ಅಧಿಕಾರಿಗಳನ್ನು ಪ್ರೋಟೋಕಾಲ್ ಹೆಸರಿನಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಂತೆ ಬಳಸಿಕೊಂಡಿದೆ. ಇದನ್ನು ಪ್ರಶ್ನಿಸಿದಾಗ ಸರಿಯಾಗಿ ಉತ್ತರ ನೀಡಲು ಸಾಧ್ಯವಾಗದೆ ಬಿಜೆಪಿಯ 10 ಶಾಸಕರನ್ನು ಅಮಾನತು ಮಾಡುವ ಮೂಲಕ ಸಂವಿಧಾನ ಮತು ್ತ ಪ್ರಜಾಪ್ರಭುತ್ವದ ನೀತಿಗಳನ್ನು ಗಾಳಿಗೆ ತೂರಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.
ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಳ್ಳುತ್ತ ಶಾಶ್ವತವಾಗಿ ಅಮಾನತುಗೊಳಿಸಬೇಕು ಎಂದು ಸಲಹೆ ನೀಡಿರುವುದನ್ನು ನೋಡಿದರೆ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದಿರುವುದು ಸ್ಪಷ್ಟವಾಗುತ್ತದೆ. ವಿಧಾನಸಭೆೆಯಲ್ಲಿ ಎಲ್ಲ ಶಾಸಕರು ಒಂದೇ. ಇಲ್ಲಿ ದಲಿತ, ಮುಸ್ಲಿಂ ಎಂಬ ಪದಗಳನ್ನು ಉಪಯೋಗಿಸಿ ತಮ್ಮ ಢೋಂಗಿ ಜಾತ್ಯತೀತ ನಿಲುವು ಪ್ರದರ್ಶಿಸುತ್ತಿದ್ದಾರೆ. ಇವರಿಗೆ ದಲಿತರ ಮೇಲೆ ಆಷ್ಟೊಂದು ಕಾಳಜಿ ಇದ್ದರೆ ದಲಿತ ಮುಖ್ಯಮಂತ್ರಿ ಮಾಡಿ ಇವರ ನಿಜವಾದ ಪ್ರೇಮ ಪ್ರದರ್ಶಿಸಬಹುದಿತ್ತು ಎಂದು ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ಐವರು ಭಯೋತ್ಪಾದಕರನ್ನು ಬಂಧಿಸಿದ ಕೆಲವೇ ನಿಮಿಷಗಳಲ್ಲಿ ಗೃಹಸಚಿವ ಪರಮೇಶ್ವರ್ ಬಂಧಿತರಿಗೂ, ಭಯೋತ್ಪಾದನೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ಕೆಲವೇ ಗಂಟೆಗಳಲ್ಲಿ ಭಯೋತ್ಪಾದಕರು ಎಂದು ಖಚಿತವಾಗುತ್ತಿದ್ದಂತೆ ಕ್ಷಮೆಯಾಚಿಸಿರುವುದು ಅವರ ಕಾರ್ಯಕ್ಷಮತೆ ತೋರಿಸುತ್ತದೆ ಎಂದು ಟೀಕಿಸಿದರು.
ಮುಖಂಡರಾದ ಮಹೇಶ್ ರಾಜೇ ಅರಸ್, ಜೋಗಿ ಮಂಜು, ಸೋಮಸುಂದರ್ ಇದ್ದರು.