ಕರ್ತವ್ಯಲೋಪದಲ್ಲಿ ವಿಸ್ತರಣಾಧಿಕಾರಿ ಅಮಾನತು

ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ ಅಕ್ರಮ ವ್ಯವಹಾರಗಳ ತನಿಖೆಗೆ ಆಗ್ರಹಿಸಿ ಸ್ಥಳೀಯ ಹಾಲು ಉತ್ಪಾದಕರು ಪ್ರತಿಭಟಿಸುತ್ತಿರುವುದು.
25CBP1
ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ ಅಕ್ರಮ ವ್ಯವಹಾರಗಳ ತನಿಖೆಗೆ ಆಗ್ರಹಿಸಿ ಸ್ಥಳೀಯ ಹಾಲು ಉತ್ಪಾದಕರು ಪ್ರತಿಭಟಿಸುತ್ತಿರುವುದು.
Published on

ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರ ಆದೇಶ- ಅವ್ಯವಹಾರ ತನಿಖೆಗೆ ಅಜ್ಜವಾರ ಗ್ರಾಮಸ್ಥರ ಆಗ್ರಹ


ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಅಕ್ರಮ ವ್ಯವಹಾರಗಳ ಪರಿಶೀಲನೆ ಮತ್ತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವ ವಿಚಾರದಲ್ಲಿ ಕರ್ತವ್ಯಲೋಪ ಮತ್ತು ಬೇಜವಾಬ್ದಾರಿ ತೋರಿದ ವಿಸ್ತರಣಾಧಿಕಾರಿಯನ್ನು (ದರ್ಜೆ 1) ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ವಿಸ್ತರಣಾಧಿಕಾರಿ ಕೆ.ಎನ್.ಸದಾಶಿವ (45) ಅಮಾನತುಗೊಂಡವರು. ಒಕ್ಕೂಟದ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ಹಿನ್ನೆಲೆಯಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.


ಅಮಾನತು ಹಿನ್ನೆಲೆ
ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿದೆ. ಗುಣಮಟ್ಟದ ಹಾಲು ಶೇಖರಣೆ, ಸಂಘದ ವ್ಯವಹಾರಕ್ಕೆ ಸಂಬಂಧಿಸಿದ ಜಮಾ ಮತ್ತು ಖರ್ಚು, ಲಾಭ ನಷ್ಟ, ಖರೀದಿ ಬಟವಾಡೆ ಲೆಕ್ಕಪುಸ್ತಕಗಳು, ಸರ್ಕಾರದ ಪ್ರೋತ್ಸಾಹಧನ ಅರ್ಹ ಹಾಲು ಉತ್ಪಾದಕರಿಗೆ ಪಾವತಿಸುವ ಬಗ್ಗೆ ವಿಸ್ತರಣಾಧಿಕಾರಿ ಪರಿಶೀಲಿಸಿಲ್ಲ. ಹಾಗೆಯೇ ಅಕ್ರಮ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿಲ್ಲ. ಇದರಿಂದ ಸದಾಶಿವ ಅವರನ್ನು ಅಮಾನತುಗೊಳಿಸಲಾಗಿದೆ.


ಅಜ್ಜವಾರ ಸಂಘದಲ್ಲಿ ಅಕ್ರಮ
ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ (ಕಳೆದ 2023ನೇ ಸಾಲಿನ ಸೆಪ್ಟೆಂಬರ್‌ನಿಂದ ಡಿಸೆಂಬರ್) 80ರಿಂದ 100 ಲೀಟರ್ ಸ್ಥಳೀಯ ಹಾಲು ಮಾರಾಟ, ಬಟವಾಡೆ ಪುಸ್ತಕದಲ್ಲಿ ಸದಸ್ಯರಲ್ಲದ ಹಾಗೂ ಹಾಲು ಪೂರೈಸದ ಅನ್ಯ ವ್ಯಕ್ತಿಗಳಿಗೆ ಬಟವಾಡೆ ಮಾಡಿರುವುದು ಪತ್ತೆಯಾಗಿದೆ. ಬೇನಾಮಿ ಕಾರ್ಡ್ ದಾರರಾದ ಅಶ್ವತ್ಥಮ್ಮ, ರವೀಂದ್ರ, ಪಿ.ಆರ್. ಆಂಜನೇಯರೆಡ್ಡಿ, ಓಬಳಮ್ಮ, ಶ್ಯಾಮಲಾ, ಗೌಸಿಯಾ ತಾಜ್, ಚಿಕ್ಕಮುನಿಯಮ್ಮ, ವೆಂಕಟೇಶಪ್ಪ, ತಿಮ್ಮಪ್ಪ, ಲಕ್ಷಮ್ಮ, ಆನಂದಮ್ಮ, ವಿ.ಚೇತನ್, ಗಾಯತ್ರಮ್ಮ ಮತ್ತು ರುಕ್ಮಿಣಿ ಎಂಬ ಹೆಸರುಗಳಿಗೆ 4.70 ಲಕ್ಷ ರೂ.ಗಳನ್ನು ಬ್ಯಾಂಕ್ ಖಾತೆಯ ಮೂಲಕ ಜಮಾಗೊಳಿಸಲಾಗಿತ್ತು. ಸಂಘಕ್ಕೆ ಸಂಬಂಧಿಸಿದ ಖರೀದಿ ಪುಸ್ತಕ, ಬಟವಾಡೆ ಪುಸ್ತಕ ನೀಡದಿರುವುದು, ಬಟವಾಡೆ ರಿಜಿಸ್ಟರ್ ಅನ್ನು ಸೂಚನಾ ಫಲಕದಲ್ಲಿ ಬಿತ್ತರಿಸಲು ಒಂದು ಪಟ್ಟಿ ಹಾಗೂ ಬ್ಯಾಂಕ್ ಬಟವಾಡೆ ಮಾಡಲು ಬೇರೆ ಪಟ್ಟಿಯನ್ನು ತಯಾರಿಸಿರುವುದು, 2023ನೇ ಸಾಲಿನ ಜನವರಿಯಿಂದ ಡಿಸೆಂಬರ್‌ವರೆಗೆ ಲೀಟರ್ ಹಾಲಿನ 5 ರೂ. ಪ್ರೋತ್ಸಾಹಧನ 84 ಸಾವಿರ ರೂ, ಏಪ್ರಿಲ್‌ನಿಂದ ಆಗಸ್ಟ್‌ವರೆಗಿನ 3,34,070 ರೂ. ಮತ್ತು ಸೆಪ್ಟೆಂಬರ್‌ನಿಂದ ಡಿಸೆಂಬರ್‌ರವರೆಗಿನ 4.70 ಲಕ್ಷ ರೂ. ಸೇರಿ 8,88,110 ರೂ.ಗಳನ್ನು ಬೇನಾಮಿ ಕಾರ್ಡ್‌ದಾರರಿಗೆ ಜಮಾ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.


ರಾಜೀನಾಮೆ ಕೊಟ್ಟ ಗುಮಾಸ್ತ
ಹಾಲು ಉತ್ಪಾದಕರ ಸಹಕಾರ ಸಂಘದ ಗುಮಾಸ್ತರಾಗಿದ್ದ ಮುನಿಕೃಷ್ಣ ಕಳೆದ ಮೇ 30ರಂದು ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ. ಆದರೆ, ಕಚೇರಿಯಲ್ಲಿನ ದಾಖಲೆಗಳನ್ನು, ನಿರ್ವಹಣೆಯ ಲೆಕ್ಕಪತ್ರ ಕೊಟ್ಟಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net