ರಸೀದಿ ನೀಡದ ಎಎಸ್‌ಐ ಅಮಾನತು

Crime news
Published on

ಹುಬ್ಬಳ್ಳಿ: ಸಂಚಾರ ನಿಯಮ ಉಲ್ಲಂಘಿಸಿದ ಬೈಕ್ ಸವಾರನಿಗೆ ರಸೀದಿ ನೀಡದೇ ಹಣ ಪಡೆದ ಆರೋಪದ ಮೇಲೆ ಇಲ್ಲಿನ ಉತ್ತರ ಸಂಚಾರ ಠಾಣೆ ಮಹಿಳಾ ಎಎಸ್‌ಐ ಅನ್ನು ಅಮಾನತುಗೊಳಿಸಿ ಹು-ಧಾ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಆರ್.ಎನ್. ಅಳಗವಾಡಿ ಎಂಬ ಎಎಸ್‌ಐ ಅಮಾನತಾಗಿದ್ದಾರೆ. ಹೊಸೂರು ಗಾಳಿ ದುರ್ಗಮ್ಮ ದೇವಸ್ಥಾನದ ಎದುರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೆಲ್ಮೆಟ್ ಧರಿಸದೇ ತೆರಳುತ್ತಿದ್ದ ಬೈಕ್ ಸವಾರನನ್ನು ತಡೆದಿದ್ದಾರೆ. ದಂಡ ಪಾವತಿಸುವಂತೆ ಹೇಳಿದ್ದಾರೆ. ಸವಾರ ನೀಡಿದ ದಂಡ ರೂಪದ ಹಣಕ್ಕೆ ರಸೀದಿ ನೀಡದೇ ಜೇಬಿಗೆ ಹಾಕಿಕೊಂಡಿದ್ದಾರೆ. ಇದನ್ನು ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಚಿತ್ರಿಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಇದರ ಮಾಹಿತಿ ಆಧರಿಸಿ ಕರ್ತವ್ಯ ಲೋಪ ಎಸಗಿರುವ ಎಎಸ್‌ಐ ಮೇಲೆ ಇಲಾಖಾ ವಿಚಾರಣೆ ಕಾಯ್ದಿರಿಸಿ, ಅಮಾನತು ಮಾಡಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ವಂಚನೆ

ಮಹಿಳೆಯರ ಉಡುಪು ತಯಾರಿಸುವ ಕಾರ್ಖಾನೆಯಿಂದ ಸಮವಸ್ತ್ರ ಖರೀದಿಸಲು ನಗರದ ಸವಣೂರ ಲೇಔಟ್‌ನ ತೌಸೀಫ್ ಎಂಬುವರಿಂದ ಮುಂಗಡ ಹಣ ಪಾವತಿಸಿಕೊಂಡು ವಂಚಿಸಲಾಗಿದೆ.
ಅನಾಮಧೇಯ ಸಂದೇಶ ನಂಬಿ ತೌಸೀಫ್, ವ್ಯಕ್ತಿಯೊಬ್ಬರ ಅಕೌಂಟ್‌ಗೆ ಮುಂಗಡವಾಗಿ ಆನ್‌ಲೈನ್ ಮೂಲಕ 1.27 ಲಕ್ಷ ರೂ. ಹಣ ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net