18 ಶಾಸಕರ ಅಮಾನತು ಮಾಡಿದ್ದೇ ಅಸಾಂವಿಧಾನಿಕ

rks
Published on

ಶಿವಮೊಗ್ಗ: ವಿಧಾನ ಮಂಡಲದ ಅಧಿವೇಶನ ಮುಗಿಯುವವರೆಗೆ ಮಾತ್ರ ಶಾಸಕರನ್ನು ಅಮಾನತಿನಲ್ಲಿಡಲು ಸ್ಪೀಕರ್‌ಗೆ ಅವಕಾಶವಿದೆ. ಆದರೆ ಈ ಹಿಂದೆ ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿಯ 18 ಶಾಸಕರನ್ನು ಸ್ಪೀಕರ್ ಯು.ಟಿ.ಖಾದರ್ ಅಮಾನತು ಮಾಡಿದ್ದೇ ಅಸಾಂವಿಧಾನಿಕ. ಈಗ ಅಮಾನತು ಹಿಂಪಡೆದಿರುವುದಕ್ಕೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಕ್ಷೇಪಿಸಿರುವುದು ಆಶ್ಚರ್ಯ ತಂದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಹೇಳಿದ್ದಾರೆ.

ಸದನದ ನಿಯಮಾವಳಿ 348ರ ಪ್ರಕಾರ ಸದಸ್ಯರನ್ನು ಅಮಾನತು ಮಾಡಲು ಅವಕಾಶವಿಲ್ಲ. ಅಂದು ಅಮಾನತು ಮಾಡಿದ ಸ್ಪೀಕರ್‌ಗೆ ಅಮಾನತು ಹಿಂಪಡೆಯುವ ಅವಕಾಶವೂ ಇದೆ. ಈ ಪ್ರಕರಣ ಮುಗಿದ ಅಧ್ಯಾಯವಾಗಿತ್ತು. ಆದರೆ ಆಯನೂರು ಮಂಜುನಾಥ್ ಇದನ್ನು ಸಂವಿಧಾನ ವಿರೋಧಿ ನಿರ್ಣಯ ಎಂದಿರುವುದು ಆಶ್ಚರ್ಯ ಮೂಡಿಸಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಮಾನತು ಹಿಂಪಡೆದ ಬಗ್ಗೆ ಸಭಾಧ್ಯಕ್ಷರು ಹಾಗೂ ರಾಜ್ಯಪಾಲರಿಗೆ ಪತ್ರ ಬರೆಯುವುದಾಗಿ ಆಯನೂರು ಹೇಳಿದ್ದಾರೆ. ಅವರು ಸದನದ 348ರ ನಿಯಮಾವಳಿಯನ್ನು ಮತ್ತೊಮ್ಮೆ ಓದಲಿ. ಸಭಾಧ್ಯಕ್ಷರು ಸದಸ್ಯರನ್ನು ಅಮಾನತು ಮಾಡುವಾಗ ಎಷ್ಟು ದಿನ, ಯಾರನ್ನು ಮಾಡಬೇಕು, ಅಮಾನತಿನಲ್ಲಿಡುವ ಶಾಸಕರ ಹೆಸರನ್ನು ಸ್ಪೀಕರ್ ಹೇಳಲೇಬೇಕೆಂಬ ಹಲವು ನಿಯಮಗಳಿವೆ. ಸ್ಪೀಕರ್ ಸ್ಥಾನದಲ್ಲಿರುವವರು ಆಚಾತುರ್ಯದ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಜಿಲ್ಲಾ ವಕ್ತಾರ ಎಸ್.ಎಸ್.ಜ್ಯೋತಿಪ್ರಕಾಶ್, ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಸ್.ದತ್ತಾತ್ರಿ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಪ್ರಮುಖರಾದ ಕೆ.ವಿ.ಅಣ್ಣಪ್ಪ, ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net