ಗಣತಿಗೆ ಹಾಜರಾಗದಿದ್ದರೆ ಅಮಾನತು

DC SAMEKSHE
Published on

  ವಿಜಯವಾಣಿ ಸುದ್ದಿಜಾಲ ಬೆಂಗಳೂರು  ಗ್ರಾಮಾಂತರ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿಜನಗಣತಿ)ಕಾರ್ಯದಲ್ಲಿ ಅಸಹಕಾರ ತೋರಿಸುತ್ತಿರುವ ಶಿಕ್ಷಕರನ್ನು ನೇರವಾಗಿ ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಖಡಕ್ ಸೂಚನೆ ರವಾನಿಸಿದ್ದಾರೆ.

ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಗಣತಿಗೆ ಚಾಲನೆ ದೊರೆತಿದ್ದು ಹಲವು ಕಾರಣ ಹೇಳಿ ಕೆಲವು ಶಿಕ್ಷಕರು ಗಣತಿ ಕಾರ್ಯಕ್ಕೆ ಹಿಂದೇಟು ಹಾಕುತ್ತಿರುವುದು ಗಮನಕ್ಕೆ ಬಂದಿದೆ, ಸಿಎಂ ಸೂಚನೆಯಂತೆ ಅಮಾನತು ಕ್ರಮಕ್ಕೆ ಮುಂದಾಗಲಾಗುವುದು ಡಿಸಿ ತಿಳಿಸಿದ್ದಾರೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ನೂರಾರು ಶಿಕ್ಷಕರಿಗೆ ನೋಟಿಸ್ ಜಾರಿಮಾಡಲಾಗಿದೆ. ಆದರೆ ಗ್ರಾಮಾಂತರ ಜಿಲ್ಲೆಯಲ್ಲಿ ಕಡೆ ಕ್ಷಣದವರೆಗೆ ಶಿಕ್ಷಕರಿಗೆ ತರಬೇತಿ ಮತ್ತಿತರ ಮಾರ್ಗದರ್ಶನ ನೀಡಲಾಗುತ್ತಿದ್ದರೂ ಕೆಲವು ಶಿಕ್ಷಕರ ನಿರ್ಲಕ್ಷ್ಯ ವರ್ತನೆಗೆ ಅಮಾನತು ಶಿಕ್ಷೆ ಖಚಿತವಾಗಲಿದೆ ಎಂದು ತಿಳಿಸಿದ್ದಾರೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು ಶಿಕ್ಷಕರು ಇದನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿರುವ ಜಿಲ್ಲಾಧಿಕಾರಿ ಇದರ ಹೊರತಾಗಿ ಅಮಾನತು ಅಸ ಪ್ರಯೋಗಕ್ಕೆ ಅವಕಾಶ ಮಾಡಿಕೊಡದಂತೆ ತಿಳಿಹೇಳಿದ್ದಾರೆ.

ಕಾಲಿಗೆ ಚಕ್ರ ಕಟ್ಟಿಕೊಂಡ ಅಧಿಕಾರಿಗಳು:

ಜಾತಿಗಣತಿ ಕಾರ್ಯ ಯಶಸ್ವಿಗೊಳಿಸುವ ಸಲುವಾಗಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿಪಂ ಸಿಇಒ ಡಾ.ಕೆ.ಎನ್.ಅನುರಾಧಾ ಸೇರಿ ಹಿರಿಯ ಅಧಿಕಾರಿಗಳು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಜಿಲ್ಲೆ ನಾಲ್ಕೂ ತಾಲೂಕುಗಳನ್ನು ಸುತ್ತುತ್ತಿದ್ದಾರೆ. ಎಲ್ಲೆಲ್ಲಿ ಸಮಸ್ಯೆಯಾಗಿದೆ ಎಂಬುದನ್ನು ಪರಿಶೀಲಿಸಿ ಸರಿಪಡಿಸಲು ಬೆವರು ಹರಿಸುತ್ತಿದ್ದಾರೆ. ದಿನದ 24 ಗಂಟೆ ಇದೇ ಕಾರ್ಯಕ್ಕೆ ಸಮಯ ಮೀಸಲಿಟ್ಟು ಶ್ರಮಿಸುತ್ತಿದ್ದರು ಹಲವು ಶಿಕ್ಷಕರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ಹಿರಿಯ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸರಣಿ ಸಭೆಗಳನ್ನು ನಡೆಸಿ ಗಣತಿ ಕಾರ್ಯ ಯಶಸ್ವಿಗೆ ಅಧಿಕಾರಿಗಳು ಕಸರತ್ತು ನಡೆಸುತ್ತಿದ್ದಾರೆ.

ಸಮೀಕ್ಷೆ ಚುರುಕುಗೊಳಿಸಿ:

ದೇವನಹಳ್ಳಿಯ ಜಿಲ್ಲಾಡಳಿತ ಭವನದಲ್ಲಿ  ಸಿಎಂ ಸಿದ್ದರಾಮಯ್ಯ ಜಿಲ್ಲಾಡಳಿತದೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಬಳಿಕ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿಲ್ಲೆಯಲ್ಲಿ ಗಣತಿ ಕಾರ್ಯ ಮಂದಗತಿಯಲಿದ್ದು ಸಿಎಂ ಜಿಲ್ಲೆಯ ಪ್ರಗತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇಂದಿನಿಂದಲೇ ಗಣತಿಯ ಕಾರ್ಯವನ್ನು ವೇಗಗೊಳಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಎಲ್ಲರೂ ತಕ್ಷಣದಿಂದ ಕಾರ್ಯಪ್ರವೃತ್ತರಾಗಿ ಪ್ರತಿನಿತ್ಯ ತಮಗೆ ನೀಡಿರುವ ಗುರಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು ಯಾರಾದರು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಮುಖ್ಯಮಂತ್ರಿಗಳ ಕಚೇರಿಗೆ ವರದಿ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net