ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ್ರೆ ಅಮಾನತು

vidhana soudha
Published on

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರ ಮುಂದಿಟ್ಟುಕೊಂಡು ಕೇರಳ, ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿಯೇತರ ಪಕ್ಷಗಳ ನಡವಳಿಕೆ ಗಮನಿಸಿ ರಾಜ್ಯದಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದೆ.

ಸಂಪ್ರದಾಯದಂತೆ ಈಗ ಎಲ್ಲ ವಿಧಾನಸಭೆಗಳಲ್ಲಿ ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡುತ್ತಾರೆ. ಈ ಸಂದರ್ಭದಲ್ಲಿ ಪೌರತ್ವ ತಿದ್ದುಪಡಿ ವಿಚಾರ ಇಟ್ಟುಕೊಂಡು ಅಧಿವೇಶನದೊಳಗೆ ಹೋರಾಟ ನಡೆಯುತ್ತಿದೆ.

ಫೆ.17ರಂದು ರಾಜ್ಯ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಿ.ಆರ್.ವಾಲಾ ಭಾಷಣ ಮಾಡಲಿದ್ದಾರೆ. ಕೇರಳ, ಪಶ್ಚಿಮ ಬಂಗಾಳದಂತೆ ಇಲ್ಲಿ ರಾಜ್ಯಪಾಲರಿಗೆ ಮುಜುಗರ ತಡೆಯುವ ಉದ್ದೇಶದಿಂದ, ಭಾಷಣ ಮಾಡುವ ಸಂದರ್ಭದಲ್ಲಿ ಅನುಸರಿಸಬೇಕಾದ ವಿಧಾನದ ಕುರಿತು ವಿಧಾನಪರಿಷತ್ತಿನಿಂದ ಲಘು ಪ್ರಕಟಣೆ ಹೊರಡಿಸಲಾಗಿದೆ.

ಎಚ್ಚರಿಕೆ: ‘ವಿಧಾನಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆ ನಿಯಮಾವಳಿ 26ರ ರೀತ್ಯ ರಾಜ್ಯಪಾಲರು ಬರುವಾಗ ಅಥವಾ ಹೊರಡುವಾಗ, ಭಾಷಣದ ಅವಧಿಯಲ್ಲಿ ಸದಸ್ಯರು ಭಾಷಣ ಮಾಡುವ ಮೂಲಕ, ಕ್ರಿಯಾಲೋಪ ಎತ್ತಿ ಅಡ್ಡಿ ಉಂಟುಮಾಡತಕ್ಕದ್ದಲ್ಲ ಎಂದು ತಿಳಿಸಲಾಗಿದೆ. ಅಡ್ಡಿ ಅಥವಾ ವಿಘ್ನ ಸದನದ ತೀವ್ರ ಉಲ್ಲಂಘನೆ ಹಾಗೂ ರಾಜ್ಯಪಾಲರಿಗೆ ತೋರಿದ ಅಗೌರವ ಎಂದು ಪರಿಗಣಿಸಿ, ಅಂಥ ಸದಸ್ಯರನ್ನು ಸದನದಲ್ಲಿ ಮಂಡಿಸಬಹುದಾದ ಪ್ರಸ್ತಾವದ ಮೇರೆಗೆ ಅಧಿವೇಶನ ಗೊತ್ತುಪಡಿಸಿದ ಅವಧಿಗೆ ಅಥವಾ ಉಳಿದ ಅವಧಿಗೆ ಅಮಾನತುಗೊಳಿಸಬಹುದು ಎಂದು ಶಾಸಕರ ಗಮನಕ್ಕೆ ತರಲಾಗಿದೆ.

ಈ ಮೂಲಕ ರಾಜ್ಯಪಾಲರ ಭಾಷಣದ ವೇಳೆ ಕಾಂಗ್ರೆಸ್, ಜೆಡಿಎಸ್ ಶಾಸಕರು ಅಡ್ಡಿ ಮಾಡಿದರೆ ಅವರನ್ನು ಅಮಾನತು ಮಾಡುವ ಎಚ್ಚರಿಕೆ ಸಂದೇಶ ಪರೋಕ್ಷವಾಗಿ ರವಾನೆಯಾಗಿದೆ.

ಕೇರಳ ವಿಧಾನಸಭೆಯಲ್ಲಿ ರಾಜ್ಯಪಾಲರಿಗೆ ‘ಗೋಬ್ಯಾಕ್’ ಘೋಷಣೆ ಹಾಕಿ ಭಾಷಣಕ್ಕೆ ಅಡ್ಡಿಪಡಿಸಿ ಮುಜುಗರ ಮಾಡಲಾಗಿದೆ. ಜತೆಗೆ ಸಿಎಎ ವಿರುದ್ಧ ರಾಜ್ಯ ವಿಧಾನಸಭೆ ಅನುಮೋದಿಸಿದ ನಿರ್ಣಯವನ್ನು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖಿಸುವಂತೆ ಅಲ್ಲಿನ ಸರ್ಕಾರ ಪ್ರಯತ್ನ ಮಾಡಿ ಯಶಸ್ವಿಯೂ ಆಯಿತು.

ರಾಜ್ಯ ಕಾಂಗ್ರೆಸ್ ಕೂಡ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ, ನಿರ್ಣಯ ಮಂಡಿಸಲು ಸರ್ಕಾರವನ್ನು ಒತ್ತಾಯಿಸಲಿದೆ. ಸಂದರ್ಭ ನೋಡಿಕೊಂಡು ಹೋರಾಟವನ್ನೂ ಮಾಡಲು ಇಚ್ಛಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net