

ಮೈಸೂರು: ಮುಡಾ ಪ್ರಕರಣದಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವನ್ನು ಅಮಾನತಿನಲ್ಲಿ ಇಡಬೇಕು ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದರು.
ತನಿಖೆ ಮುಗಿಯುವವರೆಗೆ ಮತ್ತು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ರಾಜ್ಯ ಸರ್ಕಾರವನ್ನು ಅಮಾನತಿನಲ್ಲಿ ಇಡುವುದು ಒಳ್ಳೆಯದು. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಬೇಡ. ಬದಲಿಗೆ ರಾಜ್ಯಪಾಲರೇ ಈ ಕ್ರಮ ತೆಗೆದುಕೊಳ್ಳಲಿ. ಈ ಹಿಂದೆ ವೀರೇಂದ್ರ ಪಾಟೀಲ್ ಸರ್ಕಾರವನ್ನು ಅಮಾನತಿನಲ್ಲಿಟ್ಟು ವಿಚಾರಣೆ ನಡೆಸಲಾಗಿತ್ತು. ನಂತರ ನಡೆದ ಚುನಾವಣೆಯಲ್ಲಿ ಎಸ್.ಬಂಗಾರಪ್ಪ ಸಿಎಂ ಆದರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಡಾ ಗಬ್ಬೆದ್ದು ನಾರುತ್ತಿದೆ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಸಚಿವ ಸಂಪುಟದ ಸಭೆ ಕರೆದು ಈ ಕ್ರಮದ ವಿರುದ್ಧ ನಿರ್ಣಯ ಕೈಗೊಂಡಿದ್ದು ಏಕೆ? ವಾಲ್ಮೀಕಿ ಹಗರಣದಲ್ಲಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಮುಡಾ ಪ್ರಕರಣದಲ್ಲಿ ಸ್ವತಃ ಮುಖ್ಯಮಂತ್ರಿ ವಿರುದ್ಧವೇ ಆರೋಪ ಕೇಳಿ ಬಂದಿರುವುದರಿಂದ ಸರ್ಕಾರವನ್ನು ಅಮಾನತಿನಲ್ಲಿ ಇಡಬೇಕು ಎಂದರು.
ಮುಡಾ ಹಗರಣದ ಬಗ್ಗೆ ಪರ-ವಿರೋಧ ಚರ್ಚೆ ಆಗುತ್ತಿದೆ. ರಾಷ್ಟ್ರದಲ್ಲಿ ರಾಜ್ಯದ ಮಾನ ಹರಾಜಾಗುತ್ತಿದೆ. ಮಹಾರಾಜರ ಕಾಲದಿಂದ ಕಾಪಾಡಿಕೊಂಡು ಬಂದ ಶ್ರೀಗಂಧದ ವಾಸನೆ ಈಗ ದುರ್ನಾತ ಬೀರುತ್ತಿದೆ. ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಕೆಟ್ಟ ಭಾಷೆಯಲ್ಲಿ ಹೀಗಳೆಯುವುದು ಗೌರವ ತರುವುದಿಲ್ಲ ಎಂದು ಕಿಡಿಕಾರಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿರುವ ಭಾಷೆ ಸರಿಯಿಲ್ಲ. ಸಿದ್ದರಾಮಯ್ಯ ಕೈಕೆಳಗೇ ದಾಖಲೆ ತಿದ್ದುವ ಕೆಲಸ ನಡೆಯುತ್ತಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೆಲಿಕಾಪ್ಟರ್‌ನಲ್ಲಿ ಬಂದು ದಾಖಲೆಗಳನ್ನು ಹೊತ್ತೊಯ್ದರು. ಇದು ಕಳ್ಳತನ ಎಂದು ಗುಡುಕಿದರು.
ಸಿಎಂ ಪತ್ನಿಗೆ ಸಂಬಂಧಪಟ್ಟ ದಾಖಲೆಗಳಿಗೆ ವೈಟ್ನರ್ ಹಾಕಲಾಗಿದೆ. ರಾಜ್ಯದಲ್ಲಿ ಯಾವಾಗಲೂ ಇಂತಹ ಪ್ರಕರಣಗಳು ನಡೆದಿರಲಿಲ್ಲ. ಮುಡಾ ಆಯುಕ್ತರಾಗಿದ್ದ ಜಿ.ಟಿ.ದಿನೇಶ್‌ಕುಮಾರ್ ಅವರನ್ನು ಒದ್ದು ಒಳಗೆ ಹಾಕಬೇಕಿತ್ತು ಎಂದು ಕಿಡಿಕಾರಿದರು.
ಸಿದ್ದರಾಮಯ್ಯ, ಕುಮಾರಸ್ವಾಮಿ, ನನಗೆ ಎಲ್ಲರಿಗೂ ಒಂದೇ ಕಾನೂನು. ಸಿದ್ದರಾಮಯ್ಯ ಪ್ರಕರಣದಲ್ಲಿ ಇನ್ನಷ್ಟೇ ತನಿಖೆ ಆಗಬೇಕಿದೆ. ಆದರೆ ಕುಮಾರಸ್ವಾಮಿ ಪ್ರಕರಣದಲ್ಲಿ ತನಿಖೆ ಆಗಿ ವರದಿ ಬಂದಿದೆ. ಕುಮಾರಸ್ವಾಮಿ ವಿರುದ್ಧವೂ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡದೆ ಏಕೆ ಇಟ್ಟುಕೊಂಡಿದ್ದೀರಾ? ಎಂದು ಪ್ರಶ್ನಿಸಿದರು.
ದುರಂಹಕಾರ ಬಿಡದ ದುರ್ಯೋಧನಂತೆ ನೀವು ಹಾಳಾಗುವುದನ್ನು ನಾವು ಸಹಿಸುವುದಿಲ್ಲ. ನೀವು ಮಾಡಿರುವ ತಪ್ಪನ್ನು ಸರಿಪಡಿಸಿಕೊಂಡರೆ ಉತ್ತಮ. ನಿಮ್ಮ ಅಕ್ಕಪಕ್ಕದಲ್ಲಿದ್ದವರೇ ಮಸಿ ಬಳಿಯುತ್ತಿದ್ದಾರೆಯೇ ಹೊರತು ಬೇರೆ ಪಕ್ಷದವರಲ್ಲ ಎಂದು ಸಿಎಂಗೆ ಸಲಹೆ ನೀಡಿದರು.
ರಾಜ್ಯಪಾಲರು ನೋಟಿಸ್ ಕೊಟ್ಟು ನಿಮಗೊಂದು ಅವಕಾಶ ನೀಡಿದ್ದರು. ಅದನ್ನು ಏಕೆ ದೊಡ್ಡದು ಮಾಡಿ, ಎಲ್ಲ ಹಾಳು ಮಾಡಿಕೊಂಡಿದ್ದು ಏಕೆ? ನಿಮಗೆ ನೀಡಿದ ನೋಟಿಸ್‌ಗೆ ನೀವು ಖುದ್ದು ರಾಜ್ಯಪಾಲರನ್ನು ಭೇಟಿಯಾಗಿ ಲಿಖಿತ ಉತ್ತರ ನೀಡಿ, ಮನವರಿಕೆ ಮಾಡಿಕೊಡಬೇಕಿತ್ತು. ಅದನ್ನು ಬಿಟ್ಟು ಸಚಿವ ಸಂಪುಟದ ಮುಂದಿಟ್ಟಿದ್ದು ಏಕೆ ಎಂದು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದರು.
ನಿಮ್ಮ ಮುಖಕ್ಕೆ ಮಸಿ ಬಳಿಯುತ್ತಿರುವುದು ಜೆಡಿಎಸ್, ಬಿಜೆಪಿಯವರಲ್ಲ. ಬದಲಿಗೆ ನಿಮ್ಮ ಸಚಿವರು. ನಿಮ್ಮ ಮೇಲೆ ಆರೋಪ ಬಂದಾಗ, ಹಗರಣ ಸತ್ಯ ಎಂದು ಅರಿವಾದ ಕೂಡಲೇ ‘ನಾನೇ ಸರಿ ಮಾಡುತ್ತೇನೆ’ ಎಂದು ತಾವು ಮುಂದಾಗಬೇಕಿತ್ತು. ತಮಗೆ ನೀಡಲಾಗಿದ್ದ ನಿವೇಶನವನ್ನು ವಾಪಸ್ ತೆಗೆದುಕೊಳ್ಳಿ ಎಂದು ಹೇಳಬೇಕಿತ್ತು ಎಂದರು.