ಶಂಕಿತರ ಬಿಡುಗಡೆ ಮಾಡಿದ್ದೇಕೆ? - ಸತೀಶ ಜಾರಕಿಹೊಳಿ ಆಕ್ರೋಶ

City 4 Satish Jarkiholi
Published on

ಬೆಳಗಾವಿ: ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯ ಗಳಿಂದ ಜಿಲ್ಲೆಗೆ ಬಂದಿದ್ದ ಸಾವಿರಕ್ಕೂ ಅಧಿಕ ಜನರನ್ನು ಪ್ರಯೋಗಾಲಯದಿಂದ ವರದಿ ಬರುವ ಮುನ್ನವೇ ಜಿಲ್ಲಾಡಳಿತ ಬಿಡುಗಡೆ ಮಾಡಿರುವುದು ಸರಿಯಲ್ಲ. ನಿಮ್ಮ ತಪ್ಪಿನಿಂದ ಸಾಮಾನ್ಯ ಜನರು ಸಮಸ್ಯೆ ಎದುರಿಸಬೇಕಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಎರಡು ವಾರಗಳ ಅವಧಿಯಲ್ಲಿ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಜಾರ್ಖಾಂಡ ಸೇರಿ ಮತ್ತಿತರ ರಾಜ್ಯಗಳಿಂದ ಜಿಲ್ಲೆಗೆ ಸಾವಿರಾರು ಜನರು ಬಂದಿದ್ದಾರೆ. ಅವರೆಲ್ಲರನ್ನೂ ಸ್ಥಳೀಯ ಸರ್ಕಾರಿ ವಸತಿ ನಿಲಯ, ಲಾಡ್ಜ್‌ಗಳಲ್ಲಿ ಕ್ವಾರಂಟೈನ್ ಮಾಡಿ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ, ಸರ್ಕಾರದ ಒತ್ತಡ ಇನ್ನಿತರ ಕಾರಣಗಳಿಂದ ಜಿಲ್ಲಾಡಳಿತ ವರದಿ ಬರುವ ಮುನ್ನವೇ 600ಕ್ಕೂ ಅಧಿಕ ಶಂಕಿತರನ್ನು ಬಿಡುಗಡೆ ಮಾಡಿದೆ ಎಂದು ಆರೋಪಿಸಿದರು.

ಕಳೆದ ವಾರ ಜಾರ್ಖಾಂಡನಿಂದ ಅಥಣಿ ತಾಲೂಕಿಗೆ ಬಂದಿದ್ದ 48 ಜನರನ್ನು ಗ್ರಾಮೀಣ ಪ್ರದೇಶದ ವಿವಿಧ ವಸತಿ ನಿಲಯಗಳಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ, ಅವರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರುವ ಮುನ್ನವೇ ಜಿಲ್ಲಾಡಳಿತ ಶಂಕಿತರನ್ನು ಬಿಡುಗಡೆ ಮಾಡಿದೆ.

ಅದರ ಪರಿಣಾಮವಾಗಿ ಬಿಡುಗಡೆಗೊಂಡವರಲ್ಲಿ 13 ಜನರಲ್ಲಿ ಕರೊನಾ ವೈರಸ್ ಸೋಂಕಿರುವುದು ದೃಢಪಟ್ಟಿದೆ. ಇದಕ್ಕೆಲ್ಲಾ ಯಾರು ಜವಾಬ್ದಾರಿ?. ಜಿಲ್ಲಾಡಳಿತ ನಿರ್ಲಕ್ಷೃ ಮಾಡಿದರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕ್ವಾರಂಟೈನ್ ಮಾಡಿರುವವರಿಗೆ ಪಾಸಿಟವ್ ಬಂದರೆ ಅವರನ್ನು ತಕ್ಷಣ ಚಿಕಿತ್ಸೆಗೆ ಒಳಪಡಿಸಿ ಅವರೊಂದಿಗೆ ಸಂಪರ್ಕದಲ್ಲಿದ್ದವರನ್ನೂ ಕ್ವಾರಂಟೈನ್‌ನಲ್ಲಿ ಇಡಬೇಕು. ಸರ್ಕಾರವು ಈ ವಿಷಯದಲ್ಲಿ ಆತುರದ ನಿರ್ಧಾರ, ನಿರ್ಲಕ್ಷೃ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net