

ಚಿಂಚಲಿ: ಕರೊನಾ ಶಂಕಿತರನ್ನು ಶುಕ್ರವಾರ ಪಟ್ಟಣದ ಮಾಯಕ್ಕಾದೇವಿ ಧರ್ಮಶಾಲೆಯ ವಸತಿ ನಿಲಯಕ್ಕೆ ಕ್ವಾರಂಟೈನ್‌ಗಾಗಿ ಕರೆತರುವ ಸುದ್ದಿ ತಿಳಿದು ಪಟ್ಟಣದ ಸಾರ್ವಜನಿಕರು, ಮುಖಂಡರು ಜಮಾಯಿಸಿ ವಿರೋಧ ವ್ಯಕ್ತಪಡಿಸಿದರು.
ಮಾಯಕ್ಕಾದೇವಿ ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಾತನಾಡಿ, ಚಿಂಚಲಿ ಪಟ್ಟಣದಲ್ಲಿ ಒಂದೂ ಕರೊನಾ ಪ್ರಕರಣ ದಾಖಲಾಗಿಲ್ಲ. ಈ ಪ್ರದೇಶ ಗ್ರೀನ್ ಝೋನ್‌ನಲ್ಲಿದೆ. ಕ್ವಾರಂಟೈನ್‌ಗಾಗಿ ವ್ಯಕ್ತಿಗಳನ್ನು ಇಲ್ಲಿಗೆ ಕರೆತರುವುದರಿಂದ ಸಾರ್ವಜನಿಕರು ಆತಂಕಗೊಳ್ಳುವ ಸಂಭವ ಹೆಚ್ಚಿದೆ. ಸೋಂಕಿತ ಪ್ರದೇಶಗಳಲ್ಲಿಯೇ ಕ್ವಾರಂಟೈನ್‌ಗಾಗಿ ಸಾಕಷ್ಟು ವ್ಯವಸ್ಥೆ ಇದ್ದು ಅಲ್ಲಿಯೇ ಅವರಿಗೆ ಸೂಕ್ತವ್ಯವಸ್ಥೆ ಕಲ್ಪಿಸಿ. ಯಾವುದೇ ಕಾರಣಕ್ಕೂ ಇಲ್ಲಿಗೆ ಕರೊನಾ ಶಂಕಿತ ವ್ಯಕ್ತಿ ಹಾಗೂ ಕುಟುಂಬದವರನ್ನು ಕರೆತರಬಾರದು ಎಂದು ಒತ್ತಾಯ ಮಾಡಿದರು.
ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ ಭೇಟಿ ನೀಡಿ, ರಾಯಬಾಗ ಹಾಗೂ ಕುಡಚಿಯಲ್ಲಿ ಜೀವಕ್ಕೆ ಹಾನಿಯಾಗುವಂತಹ ಯಾವುದೇ ರೋಗಿಗಳಿಲ್ಲ. ಪಾಸಿಟಿವ್ ಬಂದ ಸೋಂಕಿತರನ್ನು ನೇರವಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಮನವೊಲಿಸಲು ಪ್ರಯತ್ನಿಸಿದರು. ಬಳಿಕ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ರಾಯಬಾಗ ಸಿಪಿಐ ಕೆ.ಎಸ್. ಹಟ್ಟಿ, ಪಪಂ ಮುಖ್ಯಾಧಿಕಾರಿ ಎಸ್.ಜಿ. ಪೂಜೇರಿ, ಗ್ರಾಮ ಲೆಕ್ಕಾಧಿಕಾರಿ ಜಗದೀಶ ಕಿತ್ತೂರ, ಸ್ಥಳೀಯ ವೈದ್ಯಾಧಿಕಾರಿ ಜೀವನ ಹೊಸಟ್ಟಿ ಹಾಗೂ ಮುಖಂಡರು ಇದ್ದರು.