

ಉಳ್ಳಾಲ: ಎಲ್ಯಾರ್‌ಪದವು ಸಮೀಪ ಬಸ್ ತಂಗುದಾಣದ ಬಳಿ ಕುಳಿತಿದ್ದ ಮೀನು ಕಾರ್ಖಾನೆಯ ಕಾರ್ಮಿಕನನ್ನು ಗಾಂಜಾ ಸೇವನೆಯ ಅನುಮಾನದಿಂದ ಸ್ಥಳೀಯರು ಪೊಲೀಸರಿಗೊಪ್ಪಿಸಿದ್ದು, ಆತನಲ್ಲಿ ಶರಾಬು ಬಾಟಲ್ ಮತ್ತು ಗಾಂಜಾ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಎಲ್ಯಾರ್‌ಪದವು ಸಮೀಪದ ಐಕು ಎಂಬಲ್ಲಿ ಭಾನುವಾರ ಉತ್ತರ ಭಾರತ ಮೂಲದ ಯುವಕ ಕುಳಿತಿದ್ದು, ಆತನ ಬಗ್ಗೆ ಅನುಮಾನಗೊಂಡ ಸ್ಥಳೀಯರು ಹಿಡಿದಾಗ ಗಾಂಜಾ, ಶರಾಬು ಬಾಟಲಿ ಇತ್ತೆನ್ನಲಾಗಿದೆ. ಆತನನ್ನು ಪೊಲೀಸರಿಗೆ ಒಪ್ಪಿಸಿದರೂ ಕೆಲವೇ ಕ್ಷಣಗಳಲ್ಲಿ ಪೊಲೀಸರು ಹಿಂದಕ್ಕೆ ಕಳಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದು ಅಸಮಾಧಾನಗೊಂಡ ಸ್ಥಳೀಯ ಸುಮಾರು 25ರಷ್ಟು ಯುವಕರು ಸೋಮವಾರ ಠಾಣೆಗೆ ತೆರಳಿ ತಾವು ಹಿಡಿದು ಕೊಟ್ಟವನನ್ನು ಬಿಟ್ಟಿದ್ದೇಕೆಂದು ಪ್ರಶ್ನಿಸಿದ್ದಾರೆ. ಠಾಣೆಯಲ್ಲಿ ಎಸ್‌ಐ ಇರಲಿಲ್ಲ, ಎರಡು ದಿನಗಳ ಬಳಿಕ ಬರುತ್ತಾರೆ. ಅವರಿಲ್ಲದೆ ಆರೋಪಿಯನ್ನು ಠಾಣೆಯಲ್ಲಿಡಲಾಗದು. ಬಂದ ಬಳಿಕ ಆರೋಪಿಯನ್ನು ಪರೀಕ್ಷಿಸಲಾಗುವುದು ಎಂದು ಠಾಣೆಯಲ್ಲಿದ್ದವರು ತಿಳಿಸಿದ್ದಾರೆ. ಆತ ಕೆಲಸ ಮಾಡುತ್ತಿದ್ದ ಮೀನು ರಫ್ತು ಕಂಪನಿಗೆ ಕರೆ ಮಾಡಿ ಆತನನ್ನು ಠಾಣೆಗೆ ಕಳಿಸುವಂತೆ ಸೂಚಿಸಿದ್ದಾರೆ. ಆತ ಬಂದ ಬಳಿಕ ವಿಚಾರಿಸಿದಾಗ ಉತ್ತರ ಭಾರತದವನಾಗಿದ್ದು, ಎರಡು ವಾರಗಳ ಹಿಂದಷ್ಟೇ ಬಂದಿದ್ದಾನೆಂದು ತಿಳಿಸಿದ್ದಾರೆ. ಎಸ್.ಐ. ಬಂದ ಬಳಿಕ ಠಾಣೆಗೆ ಹಾಜರಾಗಬೇಕೆಂದು ತಿಳಿಸಿ ಬಿಡಲಾಗಿದೆ.