

ಮಂಗಳೂರು: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬಂದಿಳಿದ ಜ್ವರಬಾಧಿತ ಪ್ರಯಾಣಿಕರೊಬ್ಬರನ್ನು ಕರೊನಾ ಶಂಕೆಯ ಹಿನ್ನೆಲೆಯಲ್ಲಿ ಪ್ರತ್ಯೇಕ ವಾರ್ಡ್‌ಗೆ ವರ್ಗಾಯಿಸಲಾಗಿದೆ.
ದುಬೈ-ಮಂಗಳೂರು ವಿಮಾನದಲ್ಲಿ ಭಾನುವಾರ ಸಂಜೆ ಮಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡುವ ವೇಳೆ ಅವರಿಗೆ ತೀವ್ರ ಜ್ವರದ ಲಕ್ಷಣ ಪತ್ತೆಯಾಗಿದೆ.
ತಕ್ಷಣವೇ ಅವರನ್ನು ಆಸ್ಪತ್ರೆಗೆ ವರ್ಗಾಯಿಸಲು ನಿರ್ಧರಿಸಲಾಯಿತು. ಆದರೆ ಆ ವೇಳೆ ಆಂಬುಲೆನ್ಸ್ ಲಭ್ಯವಿಲ್ಲದ ಕಾರಣ ವೆನ್ಲಾಕ್‌ನಿಂದ ಆಂಬುಲೆನ್ಸ್ ತರಿಸಿಕೊಂಡು ಅದರಲ್ಲಿ ಪ್ರಯಾಣಿಕರನ್ನು ವೆನ್ಲಾಕ್‌ನ ಕ್ವಾರಂಟೈನ್ ವಾರ್ಡ್‌ಗೆ ವರ್ಗಾಯಿಸಲಾಯಿತು. ಅವರನ್ನು ಕೂಲಂಕಷವಾಗಿ ತಪಾಸಣೆ ನಡೆಸಿ ಮುಂದಿನ 24 ಗಂಟೆ ಕಾಲ ಪರಿಶೀಲನೆ ನಡೆಸಲಾಗುವುದು, ಒಂದು ವೇಳೆ ಕರೊನಾ ರೋಗಲಕ್ಷಣವಿದ್ದರೆ ಮಾತ್ರವೇ ಇರಿಸಿಕೊಂಡು, ಇಲ್ಲವಾದರೆ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿಕಂದರ್ ಪಾಷಾ ವಿಜಯವಾಣಿಗೆ ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದ 15 ದಿನಗಳಿಂದಲೇ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು 30 ಸಾವಿರಕ್ಕೂ ಹೆಚ್ಚು ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತಪಾಸಣಾ ಕಾರ್ಯ ಕೈಗೊಳ್ಳುವುದಕ್ಕಾಗಿ ಇಬ್ಬರು ಸಿಬ್ಬಂದಿಯನ್ನೂ ಹೆಚ್ಚುವರಿಯಾಗಿ ಒದಗಿಸಲಾಗಿದೆ. ಕೆಲದಿನಗಳ ಹಿಂದೆ ಜ್ವರವಿದ್ದು, ತಪಾಸಣೆ ನಡೆಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದ 6 ಮಂದಿ ಚೇತರಿಸಿಕೊಂಡು ನೆಗೆಟಿವ್ ರಿಪೋರ್ಟ್‌ನೊಂದಿಗೆ ಬಿಡುಗಡೆಯಾಗಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಪ್ರಯಾಣಿಕರಿಗೆ ಸಣ್ಣ ಜ್ವರವಿರುವುದು ಹೌದು, ಅದು ಕರೊನಾ ಆಗಿರುವ ಸಾಧ್ಯತೆ ಕಡಿಮೆ, ಕೇವಲ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಿದೆ. -ಡಾ.ನವೀನ್ ಕುಲಾಲ್, ದ.ಕ.ಜಿಲ್ಲಾ ಸರ್ವೇಕ್ಷಣಾಧಿಕಾರಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ಮತ್ತು ಸಚಿವಾಲಯದ ಮಾರ್ಗಸೂಚಿ ಪ್ರಕಾರ ವಿಮಾನದಲ್ಲಿ ಬಂದಿಳಿಯುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರ ಸ್ಕ್ರೀನಿಂಗ್ ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ನಡೆಸಲಾಗುತ್ತಿದೆ. ವಿ.ವಿ.ರಾವ್, ನಿರ್ದೇಶಕರು, ಮಂಗಳೂರು ಅಂತಾರಾಷ್ಟ್ರೀಯ ನಿಲ್ದಾಣ