

ಕಾರವಾರ: ಆಡಳಿತ ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಅಂಕೋಲಾ ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿದ್ದ ಎಚ್.ಅಕ್ಷತಾ ಹಾಗೂ ಕಿರಿಯ ಇಂಜಿನಿಯರ್ ಶೈಲಜಾ ನಾಯಕ ಅವರನ್ನು ಅಮಾನತು ಮಾಡಿ ಪೌರಾಡಳಿತ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಅವರು ಆದೇಶ ಹೊರಡಿಸಿದ್ದಾರೆ.
ಇಬ್ಬರು ಅಧಿಕಾರಿಗಳು ಆಡಳಿತ ಮಂಡಳಿಯ ಜತೆ ಸಮನ್ವಯ ಸಾಽಸಿರಲಿಲ್ಲ. ಸಾಮಾನ್ಯ ಸಭೆಯ ನಡಾವಳಿಗಳ ಕರಡನ್ನು ಅಧ್ಯಕ್ಷರ ಅನುಮೋದನೆ ಪಡೆಯದೇ ಪ್ರಕಟಿಸಿದ್ದರು. ಜಮಾ ಖರ್ಚುಗಳ ಬಗ್ಗೆ ಅಧ್ಯಕ್ಷರ ಗಮನಕ್ಕೆ ತರುತ್ತಿರಲಿಲ್ಲ. ಕೋಟೆವಾಡದಲ್ಲಿ ಅರಣ್ಯ ಇಲಾಖೆಯ ಪರವಾನಗಿ ಪಡೆಯದೇ ಆಲದ ಮರ ಕಡಿಸಿದ್ದ ಬಗ್ಗೆ ಮುಖ್ಯಾಧಿಕಾರಿ ಅವರ ಮೇಲೆ ಅರಣ್ಯ ಇಲಾಖೆ ಎಫ್‌ಐಆರ್ ದಾಖಲಿಸಿತ್ತು. ಸಿಂಗಲ್ ಟೆಂಡರ್ ಇರುವ ಕಾಮಗಾರಿಗಳ ಬಿಲ್‌ಗಳನ್ನು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರ ಅನುಮೋದನೆ ಇಲ್ಲದೇ ಪಾವತಿ ಮಾಡಿದ್ದರು ಎಂದು ಮಹಿಳಾ ಅಧಿಕಾರಿಗಳ ವಿರುದ್ಧ ಆಡಳಿತ ಮಂಡಳಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿತ್ತು.
ಜಿಲ್ಲಾಧಿಕಾರಿ ಅವರು ಪರಿಶೀಲನೆ ನಡೆಸಿ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಕ್ರಮ ವಹಿಸುವಂತೆ ಕಳೆದ ಏಪ್ರಿಲ್ ತಿಂಗಳಲ್ಲಿ ಪೌರಾಡಳಿತ ನಿರ್ದೇಶನಾಲಯಕ್ಕೆ ವರದಿ ನೀಡಿದ್ದರು. ಅದರ ಆಧಾರದ ಮೇಲೆ ಪೌರಾಡಳಿತ ನಿರ್ದೇಶನಾಲಯ ಕ್ರಮ ವಹಿಸಿದೆ. ಅಕ್ಷತಾ ಅವರ ಸ್ಥಾನವನ್ನು ವಿಜಯಪುರ ಜಿಲ್ಲೆಯ ಕೋಲಾರ ಪಟ್ಟಣ ಪಂಚಾಯಿತಿಗೆ ವರ್ಗಾಯಿಸಿ, ಶೈಲಜಾ ಅವರ ಸ್ಥಾನವನ್ನು ಗದಗ ಜಿಲ್ಲೆಯ ಗಜೇಂದ್ರಗಡಕ್ಕೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ. ಕೆಲ ತಿಂಗಳ ಹಿಂದೆ ಮರ ಕಟಾವಿನ ಗಲಾಟೆ ನಡೆದಾಗಲೇ ಮುಖ್ಯಾಧಿಕಾರಿಯನ್ನು ಕಲಬುರಗಿ ಜಿಲ್ಲೆಗೆ ವರ್ಗಾಯಿಸಲಾಗಿತ್ತು. ವರ್ಗಾವಣೆಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ತಡೆ ನೀಡಿತ್ತು.