

ಮೈಸೂರು: ಮೈಸೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸಿದ್ಧಾರ್ಥ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಎನ್.ಸುಷ್ಮಾ ದಾಖಲೆ ನಿರ್ಮಿಸಿದ್ದಾರೆ.
ಅಥ್ಲೆಟಿಕ್ಸ್‌ನ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ 41.55 ಮೀ. ದೂರ ಎಸೆಯುವ ಮೂಲಕ 2019ರಲ್ಲಿ ತಾನೇ ನಿರ್ಮಿಸಿದ್ದ ಹಳೆಯ ದಾಖಲೆಯನ್ನು (39.4 ಮೀ) ಮುರಿದಿದ್ದಾರೆ. ಚಿನ್ನದ ಪದಕ ಗೆದ್ದಿರುವ ಸುಷ್ಮಾ ಮೂಲತಃ ಕೆ.ಆರ್.ನಗರ ತಾಲೂಕು ಮುದ್ದೆನಹಳ್ಳಿ ಗ್ರಾಮದ ರೈತ ನಿಜಗುಣ ಶಿವಯೋಗಿ-ಮೀನಾಕ್ಷಿ ದಂಪತಿಯ ಪುತ್ರಿ. ಸುಷ್ಮಾ ಅವರನ್ನು ಕೋಚ್ ಮೋಹನ್‌ಕುಮಾರ್, ಎಂ.ಪಿ.ಚಂದ್ರಶೇಖರ್ ಹಾಗೂ ಕಾಲೇಜಿನ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.