

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ (ಕೆಎಚ್ಬಿ) ಅಭಿವೃದ್ಧಿಪಡಿಸಿರುವ ಸೂರ್ಯನಗರ ಬಡಾವಣೆ ಎರಡನೇ ಹಂತ ಮೂಲಸೌಕರ್ಯ ಕೊರತೆಯಿಂದ ನಲುಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ, ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕೆಎಚ್ಬಿಗೆ ಪತ್ರ ಬರೆದರೂ ಸಮಸ್ಯೆಗಳಿಗೆ ಮುಕ್ತಿ ಸಿಗದೆ ನಿವಾಸಿಗಳು ಪರದಾಡುತ್ತಿದ್ದಾರೆ.
ಪ್ರತಿ ತಿಂಗಳು ಕೆಎಚ್ಬಿನಿಂದ ಮನೆಗಳಿಗೆ ಟ್ಯಾಂಕರ್ ನೀರು ಪೂರೈಸುತ್ತಿದೆ. ಆದರೆ, ಮನೆಗಳಲ್ಲಿ ವಾಟರ್ ಮೀಟರ್ ಅಳವಡಿಸದ ಅಧಿಕಾರಿಗಳು ಲಕ್ಷಾಂತರ ರೂ. ಲಪಾಟಯಿಸಲು 10 ವರ್ಷಗಳಿಂದ ನೀರಿನ ಬಿಲ್ನಲ್ಲಿ ಸಮರ್ಪಕ ಮಾಹಿತಿಯನ್ನೇ ನಮೂದಿಸಿಲ್ಲ. ಕೆಎಚ್ಬಿಯ ಎಇಇ ಬೊಪ್ಪಣ್ಣ ಹಲವು ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಮಸ್ಯೆ ಬಗ್ಗೆ ಹೇಳಿದ್ದರೂ ಪ್ರಯೋಜನವಾಗಿಲ್ಲ. ಮನೆಗಳಿಗೆ ಸಮರ್ಪಕವಾಗಿ ವಿದ್ಯುತ್ ದೀಪ, ನೀರಿನ ಸಂಪರ್ಕ ಇಲ್ಲ. ಬಡಾವಣೆಯನ್ನು ಸೂಕ್ತವಾಗಿ ನಿರ್ವಹಣೆ ಮಾಡಿಲ್ಲ. ಭದ್ರತಾ ಸಿಬ್ಬಂದಿ ನಿಯೋಜನೆ ಮಾಡದ ಕಾರಣ ಪ್ರತಿನಿತ್ಯ ಬಡಾವಣೆಗೆ ಬರುವ ಅನಧಿಕೃತ ವ್ಯಕ್ತಿಗಳು, ಮದ್ಯಪಾನ ಮಾಡಿ ಎಲ್ಲೆಂದರಲ್ಲಿ ಬಾಟಲ್ಗಳನ್ನು ಬಿಸಾಡಿ ಹೋಗುತ್ತಿದ್ದಾರೆ. ಲೇಔಟ್ ತುಂಬೆಲ್ಲ ಖಾಲಿ ಬಾಟಲ್ಗಳ ರಾಶಿಯೇ ಬಿದ್ದಿದೆ.
ಜತೆಗೆ, ರಾತ್ರಿ ವೇಳೆ ರೇವ್ ಪಾರ್ಟಿಗಳು ಸಹ ನಡೆಯುತ್ತಿವೆ. ಮಕ್ಕಳು, ವೃದ್ಧರು ಓಡಾಡುತ್ತಿದ್ದ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿರುವ ಪುಂಡರು ಏನಾದರೂ ಮಾಡಿದರೆ ಎಂಬ ಪ್ರಾಣಭಯ ಕಾಡುತ್ತಿದೆ. ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ.ವಿದ್ಯುತ್ದೀಪ ಇಲ್ಲದ ಪರಿಣಾಮ ರಾತ್ರಿ ವೇಳೆ ಓಡಾಡಲು ತೊಂದರೆಯಾಗುತ್ತಿದೆ. ಕಳಪೆ ಗುಣಮಟ್ಟದಿಂದ ಕಟ್ಟಿರುವ ಮನೆಗಳು ಬಿರುಕು ಬಿಡುತ್ತಿವೆ ಎಂದು ನಿವಾಸಿಗಳು ಅಳಲು ತೊಂಡಿಕೊಂಡಿದ್ದಾರೆ.
ಟ್ಯಾಂಕರ್ ನೀರೇ ಗತಿ: 700 ಎಕರೆ ಪ್ರದೇಶದಲ್ಲಿ ಸೂರ್ಯನಗರ ಬಡಾವಣೆ ನಿರ್ಮಿಸಿದ್ದು, ಎರಡನೇ ಹಂತಕ್ಕೆ ನೀರಿನ ಸಂಪರ್ಕವನ್ನೇ ಕೊಟ್ಟಿಲ್ಲ. ಕೆಎಚ್ಬಿ ಕಡೆಯಿಂದ ಪ್ರತಿ ತಿಂಗಳು 3-4 ಟ್ಯಾಂಕರ್ ನೀರು ಮಾತ್ರ ಸರಬರಾಜು ಆಗುತ್ತಿದೆ. ರಸ್ತೆಗಳು ಹಾಳಾಗಿ 2 ವರ್ಷಗಳೇ ಕಳೆದಿವೆ. ನೂರಾರು ಕುಟುಂಬಗಳು ಪ್ರತಿ ನಿತ್ಯ ಸಮಸ್ಯೆಗಳಿಂದ ರೋಸಿ ಹೋಗಿದ್ದು, ಇಲ್ಲಿ ಯಾಕಾದರೂ ಮನೆ ಖರೀದಿಸಿದ್ದೇವೆ ಎಂಬ ಸಂಕಟವಾಗುತ್ತಿದೆ ಎಂದು ಹೆಸರಲೆಚ್ಚಿಸದ ನಿವಾಸಿಯೊಬ್ಬರು ನೋವು ತೋಡಿಕೊಂಡಿದ್ದಾರೆ.