ದೇವಾಲಯಗಳು ಧಾರ್ಮಿಕ, ವೈಚಾರಿಕ ತಾಣವಾಗಬೇಕು

2 KR Pete 1
Published on

ಕೆ.ಆರ್.ಪೇಟೆ : ದೇವಾಲಯಗಳು ಧಾರ್ಮಿಕ, ವೈಚಾರಿಕ ಮತ್ತು ಜಾಗೃತಿ ತಾಣಗಳಾಗಬೇಕು ಎಂದು ನಾಗಮಂಗಲ ಆರ್‌ಟಿಒ ಹಾಗೂ ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ತಿಳಿಸಿದರು.

ತಾಲೂಕಿನ ವಳಗೆರೆಮೆಣಸ ಗ್ರಾಮದಲ್ಲಿ ನಿವೃತ್ತ ಇಂಜಿನಿಯರ್ ಪುಟ್ಟಸ್ವಾಮಿ ನಿರ್ಮಿಸಿರುವ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಗಾಂಧೀಜಿ ಪ್ರತಿಮೆ, ಗ್ರಂಥಾಲಯ ಸಹಿತ ಸೂರ್ಯ ಮಂದಿರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮದ ನಿವೃತ್ತ ಇಂಜಿನಿಯರ್ ಪುಟ್ಟಸ್ವಾಮಿ ಮತ್ತು ರಾಧಾಪುಟ್ಟಸ್ವಾಮಿ ಅವರು ಸ್ವಂತ ಖರ್ಚಿನಿಂದ ಗ್ರಂಥಾಲಯ ಸಹಿತ ದೇವ ಸನ್ನಿಧಿ ನಿರ್ಮಿಸಿರುವುದು ಶ್ಲಾಘನೀಯ. ಮನುಷ್ಯನಿಗೆ ಬೇಕಾದ ಜ್ಞಾನ, ಶಿಕ್ಷಣ, ಸತ್ಯ, ನ್ಯಾಯ,ನೀತಿ, ಧರ್ಮ, ಕಾಯಕ ಸೇರಿದಂತೆ ಸಾಮಾಜಿಕ ತತ್ವಗಳನ್ನು ಸಮಾಜಕ್ಕೆ ಪ್ರಚುರ ಪಡಿಸುವುದು ದೇಗುಗಳ ಉದ್ದೇಶವಾಗಬೇಕು ಎಂಬ ಅವರ ಆಶಯ ಶ್ಲಾಘನೀಯ ಎಂದರು.

ಹುಟ್ಟೂರಿನ ಮಕ್ಕಳಿಗೆ, ಜನರಿಗೆ ಭಕ್ತಿಯೊಂದಿಗೆ ಜ್ಞಾನಾರ್ಜನೆಯೂ ಆಗಬೇಕು. ಇದಕ್ಕೆ ಈ ತಾಣದಲ್ಲಿ ಸ್ಫೂರ್ತಿ ದೊರಕಬೇಕು. ಮಹನೀಯರ ಪುತ್ಥಳಿ ನೋಡಿ, ಪುಸ್ತಕ, ಪತ್ರಿಕೆಗಳನ್ನು ಓದುವ ಮೂಲಕ ಜನರು ಜ್ಞಾನವಂತ ರಾಗಬೇಕು. ಮೂಢನಂಬಿಕೆಗಳು ಮತ್ತು ಕಂದಾಚಾರಗಳನ್ನು ತೊಡೆದು ಹಾಕುವಲ್ಲಿ ಸೂರ್ಯ ಮಂದಿರ ಅರಿವು ಮೂಡಿಸಬೇಕು. ತಮ್ಮ ಸಮಾಧಿಯೂ ಇದೇ ಪರಿಸರದಲ್ಲಿ ಆಗಬೇಕು ಎಂದು ಪುಟ್ಟಸ್ವಾಮಿ ಸಂಕಲ್ಪ ಮಾಡಿದ್ದಾರೆ. ಇದು ದೊಡ್ಡ ಆದರ್ಶ ಎಂದು ಮಲ್ಲಿಕಾರ್ಜುನ್ ಶ್ಲಾಘಿಸಿದರು.

ಸೂರ್ಯ ಮಂದಿರದ ಸುತ್ತಲೂ ಮಹನೀಯರ ಹೇಳಿಕೆ, ಸುಭಾಷಿತಗಳನ್ನು ಬರೆಸಲಾಗಿದೆ. ನಾವು ಯಾವ ರೀತಿ ಬದುಕಬೇಕು ಎಂಬ ನೀತಿ ಸಾರಗಳು ಇಲ್ಲಿವೆ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಪಾಲನೆ ಮತ್ತು ಸಹ ಬಾಳ್ವೆಗೆ ಇವೆಲ್ಲವೂ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.

ತಾಪಂ ಮಾಜಿ ಅಧ್ಯಕ್ಷರಾದ ಕೆ.ಬಿ.ಈಶ್ವರಪ್ರಸಾದ್, ವಿ.ಎನ್. ಮಹಾದೇವೇಗೌಡ, ತಾಲೂಕು ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ನಾಟನಹಳ್ಳಿ ಗಂಗಾಧರ, ಮನ್‌ಮಲ್ ನಿರ್ದೇಶಕ ಡಾಲು ರವಿ, ಗಾಯಕ ಶಿವಾರ ಉಮೇಶ್, ಎಪಿಎಂಸಿ ಮಾಜಿ ನಿರ್ದೇಶಕ ಸೋಮಸುಂದರ್, ಡಿಎಸ್‌ಎಸ್ ತಾಲೂಕು ಸಂಚಾಲಕ ವಿ.ಬಿ.ಮಂಜುನಾಥ್,

ಗ್ರಾ.ಪಂ.ಮಾಜಿ ಅಧ್ಯಕ್ಷ ನಾಗೇಂದ್ರ, ಗ್ರಾ.ಪಂ.ಸದಸ್ಯರಾದ ಕುಮಾರ್, ನೇತ್ರಾವತಿ, ರಮಾನಂದ,ಶ್ರೀನಿವಾಸ ಪುಟ್ಟಸ್ವಾಮಿ, ವಿ.ಪಿ.ಸರಳಾ, ವಿ.ಪಿ.ಮಂಜುಳಾ, ವಿ.ಪಿ.ಇಂದ್ರ, ವಿ.ಪಿ.ಅನು, ಸೂರ್ಯ ಮಂದಿರ ಟ್ರಸ್ಟ್ ನಿರ್ವಹಣಾ ಸಮಿತಿ ಸದಸ್ಯರಾದ ವಿ.ಬಿ.ಮಂಜುನಾಥ್, ವಿ.ಡಿ.ಜಯಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net