

ಮೈಸೂರು: ಮೈಸೂರಿನ ಅಷ್ಟಾಂಗ ಯೋಗ ಶಾಲೆಯ ಸಹಯೋಗದೊಂದಿಗೆ ಸುತ್ತೂರಿನಲ್ಲಿ ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಅಷ್ಟಾಂಗ ಯೋಗ ಶಾಲೆಯ ಡಾ. ರಮೇಶ್ ಶೆಟ್ಟಿ ಈ ಸಂದರ್ಭ ಮಾತನಾಡಿ, ಈ ದಿನ ಸೂರ್ಯನ ಜನ್ಮ ದಿನ. ಇಡೀ ಜಗತ್ತಿಗೆ ಬೆಳಕು ಮತ್ತು ಜೀವಕಾಂತಿಯನ್ನು ನೀಡುವ ಸೂರ್ಯದೇವ ಆಗಿಂದಾಗ್ಗೆ ತನ್ನ ಪಥ ಬದಲಾಯಿಸುತ್ತಿರುತ್ತಾನೆ. ಇದನ್ನೇ ರಥ ಸಪ್ತಮಿ ಎಂದು ಕರೆಯುತ್ತಾರೆ.
ಸೂರ್ಯ ನಮಸ್ಕಾರ ಮಾಡುವುದರಿಂದ ವ್ಯಕ್ತಿಯು ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸಾಧ್ಯ. ಹೀಗಾಗಿ ಋಷಿಮುನಿಗಳು, ಹಿರಿಯರು ಸೂರ್ಯ ನಮಸ್ಕಾರವನ್ನು ದೈನಂದಿನ ಚಟುವಟಿಕೆಯ ಒಂದು ಭಾಗವಾಗಿಸಿಕೊಂಡಿದ್ದರು. ಆದ್ದರಿಂದ ವಿದ್ಯಾರ್ಥಿಗಳು ನಿತ್ಯ ಸೂರ್ಯ ನಮಸ್ಕಾರ ಮಾಡಬೇಕು ಎಂದು ಹೇಳಿದರು.
ಸಂಸ್ಥೆ ಕಾರ್ಯದರ್ಶಿ ಎಸ್.ಶಿವಕುಮಾರಸ್ವಾಮಿ, ಸಹಾಯಕ ಆಡಳಿತಾಧಿಕಾರಿ ಎಸ್.ಪಿ.ಉದಯಶಂಕರ್, ಹೆಚ್ಚುವರಿ ಸಂಯೋಜನಾಧಿಕಾರಿ ಸಂಪತ್ತು, ಸಹಾಯಕ ಸಂಯೋಜನಾಧಿಕಾರಿ ವೀರಭದ್ರಯ್ಯ, ಉಪನ್ಯಾಸಕ ಗುರುಶಾಂತಪ್ಪ ನಿಡವಣಿ, ಅಷ್ಟಾಂಗ ಯೋಗ ಶಾಲೆಯ ವಿದೇಶಿ ಶಿಷ್ಯವೃಂದದವರು ಇದ್ದರು.