ಜಿಲ್ಲೆಯಲ್ಲಿ ಬೆಳಗುತ್ತಿದೆ ಸೂರ್ಯ ಘರ್!

images
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಪ್ರತಿ ಮನೆಗೆ ಉಚಿತ ವಿದ್ಯುತ್ ನೀಡುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ 2024ರ ೆಬ್ರವರಿಯಲ್ಲಿ ಜಾರಿಗೊಳಿಸಿದ ಸೂರ್ಯಘರ್ ಯೋಜನೆಗೆ ಗ್ರಾಮಾಂತರ ಜಿಲ್ಲೆಯಲ್ಲಿ ಸ್ಪಂದನೆ ವ್ಯಕ್ತವಾಗುತ್ತಿದೆ. ಇದುವರೆಗೆ ಜಿಲ್ಲೆಯಲ್ಲಿ 319 ಗ್ರಾಹಕರು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದು, 1.45 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಕಂಡಿದ್ದಾರೆ.

ರಾಜ್ಯದಲ್ಲಿ ಜಾರಿಯಾಗಿರುವ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಯಿಂದಾಗಿ ಸಾರ್ವಜನಿಕರು ಸೂರ್ಯಘರ್ ಯೋಜನೆ ಅಳವಡಿಸಿಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ ಎಂಬ ಮಾತು ಸಹಜವಾಗಿ ಕೇಳಿಬರುತ್ತಿತ್ತು. ಆದರೆ ಈ ಯೋಜನೆಯ ಲಾಭದ ಬಗ್ಗೆ ಮಾಹಿತಿ ಪಡೆದ ಹಲವು ಗ್ರಾಹಕರು ಸೂರ್ಯಘರ್ ಯೋಜನೆಗೆ ಒಳಪಡಲು ಉತ್ಸುಕತೆ ತೋರಿಸುತ್ತಿದ್ದು ಬಹುಪಯೋಗಿ ಯೋಜನೆ ಜಿಲ್ಲೆಯಲ್ಲಿ ದಾಪುಗಾಲು ಹಾಕಲಾರಂಭಿಸಿದೆ.

ಪಿಎಂ ಸೌರಗೃಹ ಯೋಜನೆ: ಉಚಿತ ವಿದ್ಯುತ್ ಪಡೆಯುವ ಜತೆಗೆ ನಿಯಮಿತವಾಗಿ ಆದಾಯವನ್ನೂ ಗಳಿಸಬಹುದಾದ ಪಿಎಂ ಸೌರಗೃಹ ಯೋಜನೆಗೆ ( ಪ್ರಧಾನಮಂತ್ರಿ ಸೂರ್ಯಘರ್ ಯೋಜನೆ) ಇದಾಗಿದ್ದು ಬೆಸ್ಕಾಂ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದು ವಿದ್ಯುತ್ ಸ್ವಾವಲಂಬನೆ ಹೊಂದುವಲ್ಲಿ ಯಶ ಕಂಡಿದ್ದಾರೆ.

ಹೆಚ್ಚುವರಿ ವಿದ್ಯುತ್ ಮಾರಾಟ: ಜಿಲ್ಲೆಯಲ್ಲಿ ಹಲವು ಗ್ರಾಹಕರು ತಮ್ಮ ಮನೆಗಳ ಮೇಲೆ ಈ ಯೋಜನೆಯ ಪ್ರಯೋಗ ಆರಂಭಿಸಿದ್ದು ಸಾಕಷ್ಟು ಯಶಸ್ವಿಯಾಗಿದ್ದಾರೆ. ಇನ್ನೂ ಹಲವು ಗ್ರಾಹಕರು ಈ ಯೋಜನೆಯ ಸದ್ಭಳಕೆಗಾಗಿ ಮುಂದೆ ಬರುತ್ತಿದ್ದು ಇಲಾಖೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ತಮ್ಮ ಮನೆಗಳ ಮಹಡಿ ಅಥವಾ ಛಾವಣಿಯ ಮೇಲೆ ಸೌರಲಕ (ಸೋಲಾರ್) ಅಳವಡಿಸಿಕೊಂಡು ಮನೆ ಬಳಕೆಗೆ ಬೇಕಾಗುವಷ್ಟು ವಿದ್ಯುತ್ ಉತ್ಪಾದಿಸಿಕೊಳ್ಳುವ ಜತೆಗೆ ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ಹೆಚ್ಚುವರಿ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಮಾಡುವ ಮೂಲಕ ಆದಾಯದ ಮೂಲವನ್ನು ಕಂಡುಕೊಂಡಿದ್ದಾರೆ.

ಏನಿದರ ಪ್ರಯೋಜನ: ಈ ಯೋಜನೆ ಮೂಲಕ ಗ್ರಾಹಕರು ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬನೆ ಸಾಧಿಸಬಹುದು, ಈ ಯೋಜನೆ ಮೂಲಕ ಗ್ರಾಹಕರು ಏನಿಲ್ಲವೆಂದರೂ ತಿಂಗಳಿಗೆ 300 ಯೂನಿಟ್‌ನಷ್ಟು ವಿದ್ಯುತ್ ಪಡೆಯಬಹುದು. ಮನೆ ಬಳಕೆಗೆ ಸಾಕಾಗುವಷ್ಟು ವಿದ್ಯುತ್‌ನ್ನು ಉಚಿತವಾಗಿ ಬಳಕೆ ಮಾಡಿ ಹೆಚ್ಚುವರಿಯಾಗಿ ಉತ್ಪಾದನೆಯಾಗುವ ವಿದ್ಯುತ್‌ನ್ನು ವಿದ್ಯುತ್ ಸರಬರಾಜು ಸಂಸ್ಥೆಗೆ ಮಾರಾಟ ಮಾಡುವ ಮೂಲಕ ಹಣ ಪಡೆಯಬಹುದು. ಕನಿಷ್ಟ 25 ವರ್ಷಗಳ ಕಾಲ ವಿದ್ಯುತ್ ಬಿಲ್ ಪಾವತಿಸುವ ಅಗತ್ಯವೇ ಬರುವುದಿಲ್ಲ, ಈ ಯೋಜನೆ ದೀರ್ಘಾವಧಿಯಾಗಿದ್ದು ಗ್ರಾಹಕರು ಸಂತೃಪ್ತಗೊಳ್ಳುವಲ್ಲಿ ಅನುಮಾನವೆ ಇಲ್ಲ ಎಂದು ಅಧಿಕಾರಿಗಳು ಭರವಸೆ ನೀಡುತ್ತಾರೆ.

ಸಹಾಯಧನ ಲಭ್ಯವಿದೆ: ಈ ಯೋಜನೆ ಮೂಲಕ 1.ಕಿಲೋ ವ್ಯಾಟ್‌ನಿಂದ ಸುಮಾರು 500 ಕಿ.ಲೋ ವ್ಯಾಟ್‌ವರೆಗೆ ವಿದ್ಯುತ್ ಉತ್ಪಾದನೆ ಮಾಡಬಹುದು, ಈ ಯೋಜನೆಯಡಿ ಸುಮಾರು 70 ಸಾವಿರ ರೂಪಾಯಿವರೆಗೆ ಸಹಾಯಧವನೂ ಲಭ್ಯವಿದೆ, 1 ಕೆ.ವಿ.ಸಾಮರ್ಥ್ಯದ ಸೌರಲಕ ಅಳವಡಿಕೆಗೆ ಸುಮಾರು 30 ಸಾವಿರ ರೂಪಾಯಿ ಸಹಾಯಧನ ಸಿಗಲಿದ್ದು, 3 ಕೆ.ವಿ.ಸಾಮರ್ಥ್ಯದ ಸೌರಲಕ ಅಳವಡಿಸಲು 70ರಿಂದ 78 ಸಾವಿರ ರೂಪಾಯಿವರಗೆ ಸಹಾಯಧನ ಸಿಗಲಿದೆ, ಅಗತ್ಯವಿದ್ದರೆ ಅಷ್ಟು ದೊಡ್ಡದಾದ ಕಟ್ಟಡ ಜಾಗ ಇರುವವರು 4 ಕೆ.ವಿ ಸಾಮರ್ಥ್ಯದ ಸೌರಲಕ ಅಳವಡಿಸಿಕೊಳ್ಳಲೂ ಅವಕಾಶವಿದೆ, ಆದರೆ ಸಹಾಯಧನ ಗರಿಷ್ಟಮಟ್ಟ 78 ಸಾವಿರ ರೂಪಾಯಿ ನಿಗಧಿಯಾಗಿದೆ. ಉಳಿದ ಹಣವನ್ನು ಗ್ರಾಹಕರೇ ಬಳಸಬೇಕು. 1 ಕೆ.ವಿ ಸಾಮರ್ಥ್ಯದ ಸೌರಲಕ ಅಳವಡಿಸಿಕೊಳ್ಳಲು ಸುಮಾರು 60 ಸಾವಿರ ರೂಪಾಯಿಯಿಂದ 80 ಸಾವಿರ ರೂಪಾಯಿವರಗೆ ಖರ್ಚು ಬರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಇದೊಂದು ಉತ್ತಮ ಯೋಜನೆಯಾಗಿದೆ ಹಾಗೂ ದೀರ್ಘಾವಧಿಯವರಗೆ ಅನುಕೂಲವಾಗಲಿದೆ, ಒಂದು ಬಾರಿ ಈ ಯೋಜನೆ ಅಳವಡಿಸಿಕೊಂಡರೆ ಸುಮಾರು 25 ವರ್ಷದವರಗೆ ಸಮಸ್ಯೆ ಇರುವುದಿಲ್ಲ ಈ ಬಗ್ಗೆ ಮತ್ತಷ್ಟು ಹೆಚ್ಚಿನ ಪ್ರಚಾರದ ಅಗತ್ಯವಿದೆ, ಮನೆ ಬಳಕೆಗೆ ಉಚಿತ ವಿದ್ಯುತ್ ಬಳಕೆ ಜತೆಗೆ ಹೆಚ್ಚುವರಿ ವಿದ್ಯುತ್‌ನ್ನು ಮಾರಾಟ ಮಾಡುವ ಮೂಲಕ ಹಾಕಿದ ಬಂಡವಾಳವನ್ನು ಶೀಘ್ರ ವಾಪಸ್ ಪಡೆಬಹುದು.

ಡಾ.ಎನ್.ಶಿವಶಂಕರ್, ಬೆಸ್ಕಾಂ ಎಂಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net