ಲಿಂಗ ಸ್ಪರ್ಶಿಸಿದ ಸೂರ್ಯದೇವ

Surya Dev touched the linga
Surya Dev touched the linga
Published on

ಮಹಾಲಿಂಗಪುರ: ಹಿಂದುಗಳ ನೂತನ ವರ್ಷ ಯುಗಾದಿ ಪಾಡ್ಯದ ದಿನವಾದ ಭಾನುವಾರ ಬೆಳಗ್ಗೆ ಸೂರ್ಯೋದಯದ ಪೂರ್ವಾಭಿಮುಖವಾಗಿರುವ ಸಮೀಪದ ರನ್ನಬೆಳಗಲಿಯ ಪುರಾತನ ಅಮೃತೇಶ್ವರ ದೇಗುಲದಲ್ಲಿ ಸೂರ್ಯನ ಕಿರಣಗಳು ಗರ್ಭಗುಡಿಯಲ್ಲಿರುವ ಬೃಹತ್ ಅಮೃತೇಶ್ವರ ಲಿಂಗವನ್ನು ಸ್ಪರ್ಶಿಸಿದ ನಯನಮನೋಹರ ದೃಶ್ಯ ಗೋಚರಿಸಿತು. ಅಲ್ಲಿ ಹಾಜರಿದ್ದ ಅನೇಕ ಭಕ್ತರು ಈ ಅವಿಸ್ಮರಣೀಯ ದೃಶ್ಯವನ್ನು ನೋಡಿ ಪುಳಕಿತಗೊಂಡು ಭಕ್ತಿಭಾವದಿಂದ ಕೈಮುಗಿದು ಅಮೃತೇಶ್ವರ ಹಾಗೂ ಸೂರ್ಯದೇವನ ಸಮ್ಮಿಲನಕ್ಕೆ ಸಾಕ್ಷಿಯಾದರು.

ನಕ್ಷತ್ರಾಕಾರದ ತಳವಿನ್ಯಾಸ ಹೊಂದಿರುವ ಈ ಭವ್ಯ ದೇಗುಲ ಸುಮಾರು 5 ಅಡಿ ಜಗುಲಿಯ ಮೇಲೆ ನಿಂತಿದ್ದು ಇದರ ಸುತ್ತಲೂ ಇರುವ ಸ್ಥಳವೇ ಪ್ರದಕ್ಷಣೆಯ ಪಥವಾಗಿದೆ. ಶಿಲೆಗಳಿಂದ ನಿರ್ಮಾಣಗೊಂಡ ಈ ದೇವಾಲಯದ ಶಿಲ್ಪ ಸೌಂದರ್ಯ ಗಮನಸೆಳೆದರೆ, ದೇವಾಲಯದ ಕಂಬಗಳ ಮೇಲಿನ ಸೂಕ್ಷ್ಮ ಅಲಂಕಾರಗಳು ಪ್ರತಿಯೊಂದು ಕಂಬಗಳಲ್ಲಿ ವಿವಿಧ ರೀತಿಯಲ್ಲಿದ್ದು ನೋಡುಗರ ಗಮನ ಸೆಳೆಯುತ್ತವೆ. ಈ ವರ್ಷ ಲಿಂಗದ ಮೇಲಿನ ಸೂರ್ಯ ಕಿರಣಗಳ ಸ್ಪರ್ಶ ಸ್ಪಷ್ಟವಾಗಿತ್ತು ಎಂದು ಭಕ್ತರು ಸಂತಸ ವ್ಯಕ್ತಪಡಿಸಿದರು.

ಯೋಗ ಶಿಕ್ಷಕ ರಾಘವೇಂದ್ರ ನೀಲಣ್ಣವರ ಹಾಗೂ ಅರ್ಚಕ ಪಂಡೀತ ಪೂಜಾರಿ ಮಾತನಾಡಿ, ಕಲೆ ಕಲಾವಿದರ ತವರು ಎನಿಸಿಕೊಂಡ ಮಹಾಕವಿ ರನ್ನನ ತವರೂರಿನ ಅತ್ಯಂತ ಪ್ರಾಚೀನ ದೇವಾಲಯವಾದ ಅಮೃತೇಶ್ವರ ದೇವಾಲಯದ ಮಹಾಲಿಂಗಕ್ಕೆ ಸೂರ್ಯ ರಶ್ಮಿಯು ಪ್ರತಿ ವರ್ಷ ಯುಗಾದಿ ಹಬ್ಬದಂದು ಮಹಾಲಿಂಗಕ್ಕೆ ಸ್ಪರ್ಶವಾಗುವ ನೋಟ ನೋಡಲು ನಯನಮನೋಹರವಾಗಿದ್ದು, ದೇವಸ್ಥಾನವು ಅತ್ಯಂತ ಭವ್ಯ ಮತ್ತು ಅಮೋಘವಾದ ವಾಸ್ತು ಶಿಲ್ಪಕಲೆಗಳಿಂದ ರೂಪಗೊಂಡಿದೆ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೂಪಾ ಹೊಸಟ್ಟಿ, ಸದಾಶಿವ ಪುರಾಣಿಕ, ಎಸ್. ಬಿ. ರಡರಟ್ಟಿ, ಎ.ಎಂ.ಕಂಬಾರ, ಸದಾಶಿವ ಹೊಸಟ್ಟಿ, ಈಶ್ವರ ಪೂಜಾರಿ, ವಿಠ್ಠಲ ಮುಧೋಳ, ಮುತ್ತಪ್ಪ ಹೊಸಪೇಟೆ ಮನೋಹರ ದೃಶ್ಯವನ್ನು ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net