ಕಲಾಕೇಂದ್ರದಿಂದ ಕಲೆ ಮೂಲಸತ್ವ ಉಳಿವು

prashasthi
ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಯಕ್ಷ ಸಪ್ತಾಹ ಸಮಾರೋಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ ಅವರಿಗೆ ಸದಾನಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು
Published on

ಕೋಟ: ಯಕ್ಷಗಾನ ಕ್ಷೇತ್ರಕ್ಕೆ ಸದಾನಂದ ಹೆಬ್ಬಾರ್ ಅವರ ಕೊಡುಗೆ ಮಹತ್ವದ್ದು. ಯಕ್ಷಗಾನ ಕಲಾಕೇಂದ್ರದ ಮೂಲಕ ಸಾವಿರಾರು ಉತ್ತಮ ಶಿಷ್ಯರನ್ನು ತಯಾರು ಮಾಡಿದ್ದು, ಕಲೆ ಮೂಲಸತ್ವ ಉಳಿಸಿ ಮುಂದೆ ಸಾಗಲು ಕೇಂದ್ರಗಳು ಅಗತ್ಯ ಎಂದು ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಹೇಳಿದರು.

ಗುಂಡ್ಮಿಯಲ್ಲಿ ಇತ್ತೀಚೆಗೆ ಹಂಗಾರಕಟ್ಟೆ-ಐರೋಡಿಯ ಯಕ್ಷಗಾನ ಕಲಾಕೇಂದ್ರದ ಆಶ್ರಯದಲ್ಲಿ, ಕಲಾಕೇಂದ್ರದ ಸಂಸ್ಥಾಪಕ ದಿ.ಐರೋಡಿ ಸದಾನಂದ ಹೆಬ್ಬಾರರ ಸಂಸ್ಮರಣೆ, ಸದಾನಂದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಯಕ್ಷ ಸಪ್ತೋತ್ಸವ ಸಮಾರೋಪದಲ್ಲಿ ಮಾತನಾಡಿದರು.

ಶಿಕ್ಷಕ, ರಂಗಭೂಮಿ ಕಲಾವಿದ, ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳರಿಗೆ ಸದಾನಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ.ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಒಎನ್‌ಜಿಸಿ ಸಂಸ್ಥೆಯ ನಿವೃತ್ತ ಮಹಾಪ್ರಬಂಧಕ ಬನ್ನಾಡಿ ನಾರಾಯಣ ಆಚಾರ್ಯ, ಹುಬ್ಬಳ್ಳಿಯ ಹೋಟೆಲ್ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಯಕ್ಷ ಕಲಾಸಕ್ತ ಶಂಕರ ಐತಾಳ, ಸಾಲಿಗ್ರಾಮ ಗುರುನರಸಿಂಹ ದೇಗುಲ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಎ.ಪಿ.ಐತಾಳ ಇದ್ದರು.

ಕಲಾಕೇಂದ್ರ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ಅಂಬರೀಷ್ ಭಟ್ ಸಂಸ್ಮರಣಾ ಮಾತನಾಡಿದರು. ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಸನ್ಮಾನಿತರನ್ನು ಪರಿಚಯಿಸಿದರು. ಮೇಘಶ್ಯಾಮ್ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಹೆರೆಂಜಾಲು ಪ್ರಶಾಂತ್ ಮಯ್ಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net