

ಸಕಲೇಶಪುರ: ಪರಿಸರ ಸಂರಕ್ಷಣೆಯಿಂದ ಮಾತ್ರ ಮಾನವ ಸಂಕುಲ ಉಳಿಯಲು ಸಾಧ್ಯ ಎಂದು ವಲಯ ಅರಣ್ಯಾಧಿಕಾರಿ ಶಿಲ್ಪಾ ವಸಂತ್ ಹೇಳಿದರು.
ತಾಲೂಕಿನ ಬಾಗೆ ಜೆಎಸ್‌ಎಸ್ ಶಾಲೆಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಪರಿಸರ ದಿನಾಚರಣೆ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗೆ ಹೆಚ್ಚಿನ ರಸಗೊಬ್ಬರ ಹಾಗೂ ಔಷಧಗಳನ್ನು ಬಳಸಲಾಗುತ್ತಿದ್ದು, ಇದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದೆ. ಅಲ್ಲದೆ ಅತಿಯಾದ ಪ್ಲಾಸ್ಟಿಕ್ ಹಾಗೂ ಇ-ತ್ಯಾಜ್ಯಗಳಂತಹ ಕೊಳೆಯದ ತ್ಯಾಜ್ಯಗಳಿಂದ ಪರಿಸರ ನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಕೆಲವು ತ್ಯಾಜ್ಯಗಳನ್ನು ಸಾವಯವ ಗೊಬ್ಬರವಾಗಿ ಬಳಸಬೇಕಾಗಿದೆ. ಸಸ್ಯಶಾಮಲಗಳಂತಹ ಪರಿಸರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಣ್ಯಗಳನ್ನು ಹೆಚ್ಚಿಸಬೇಕು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದರು.
ಶಾಲೆಯ ಪ್ರಾಂಶುಪಾಲ ಬಿ.ಮಧುಕುಮಾರ್ ಮಾತನಾಡಿ, ನಾವು ಪರಿಸರವನ್ನು ಕ್ರಮಬದ್ಧವಾಗಿ ಕಾಪಾಡಿಕೊಳ್ಳದಿದ್ದರೆ, ನಮ್ಮ ಭವಿಷ್ಯಕ್ಕೆ ಪ್ರಕೃತಿ ವಿಕೋಪಗಳಿಂದ ತೊಂದರೆಯಾಗುತ್ತದೆ. ನಾವು ಪರಿಸರದಲ್ಲಿನ ಸಂಪನ್ಮೂಲಗಳನ್ನು ರಕ್ಷಿಸಬೇಕು. ವಾಯು, ಜಲ ಮಾಲಿನ್ಯಗಳು ಪರಿಸರವನ್ನು ನಾಶಮಾಡುತ್ತಿವೆ. ಮನುಷ್ಯ ಹಾಗೂ ಪರಿಸರದ ನಡುವಿನ ಸಂಬಂಧ ಇತ್ತೀಚೆಗೆ ಹದಗೆಟ್ಟಿದ್ದು ಆಧುನಿಕ ಜೀವನದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಪೃಕೃತಿಯ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ಪರಿಸರ ಸಂರಕ್ಷಣೆ ಮಾಡಲು ಮುಂದಾಗಬೇಕು ಎಂದರು.
ಶಾಲೆಯ ವಿವಿಧ ತಂಡಗಳ ನಾಯಕ, ಉಪನಾಯಕರಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.ಕಲಾ ಶಿಕ್ಷಕರಾದ ಶ್ರೀಧರ್ ಅವರು ನಿರ್ದೇಶಿಸಿ, ನಿರ್ಮಿಸಿದ ‘ಉಳಿಸೋಣ ಬನ್ನಿ’ ಎಂಬ ಪರಿಸರ ಸಂರಕ್ಷಣೆಯ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.
ನಂತರ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆ ಕುರಿತು ‘ಗ್ರೀಡಿ ಹ್ಯೂಮನ್’ ಎಂಬ ನಾಟಕವನ್ನು’ ಕಡಿಯದಿರಿ ಮರ ಬರದಿರಲಿ ಬರ, ಪರಿಸರ ಉಳಿಸಿ’ ಎಂಬ ಉತ್ತಮ ಸಂದೇಶವನ್ನು ನೀಡುವ ಮೂಲಕ ನಾಟಕ ಪ್ರದರ್ಶಿಸಲಾಯಿತು. ಶಾಲೆಯ ಶಿಕ್ಷಕ ವೃಂದ, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.