ಯುವಕರಿಂದ ಭಾರತದ ಸಂಸ್ಕೃತಿಯ ಉಳಿವು

h10-Guru Aradhana 2
Published on

ಹುಬ್ಬಳ್ಳಿ: ಭವ್ಯ ಭಾರತದ ಸಂಸ್ಕೃತಿ, ಸನಾತನ ಧರ್ಮವು ಯುವಕರ ಕೈಯಲ್ಲಿದೆ. ಅದನ್ನು ಉಳಿಸಿ ಬೆಳೆಸುವ ಕೆಲಸವನ್ನು ಯುವಕರು ಮುಂದುವರಿದು ಮಾಡಬೇಕು ಎಂದು ಕಕ್ಮರಿ ರಾಮತೀರ್ಥ ಆಶ್ರಮದ ಶ್ರೀ ತಾರಾಚಂದ ಮಹಾರಾಜರು ತಿಳಿವಳಿಕೆ ನೀಡಿದರು.

ಶ್ರೀ ಗಣಪತರಾವ್ ಮಹಾರಾಜ್ ಶಿಷ್ಯ-ಪ್ರಶಿಷ್ಯ ಸತ್ಸಂಗ ಮಂಡಳಿ ವತಿಯಿಂದ ಇಲ್ಲಿಯ ಗೋಕುಲ ರಸ್ತೆಯ ರಾಜಧಾನಿ ಕಾಲನಿಯ ಕರಿಯಮ್ಮ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ‘ಗುರು ಆರಾಧಾನಾ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಆಧ್ಯಾತ್ಮದ ಬಲದ ಮೇಲೆ ಭಾರತೀಯರ ಶಕ್ತಿ ನಿಂತಿದೆ. ಭಕ್ತಿ, ನೀತಿ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ನಮ್ಮೆಲ್ಲರ ಅನುಕರಣೆ ಮತ್ತು ಅನುಪಾಲನೆಯಿಂದ ನಮ್ಮ ಸನಾತನ ಹಿಂದು ಧರ್ಮದ ಉಳಿಯಲಿದೆ ಎಂದರು.

ಮಹೇಶ ಜೋಶಿ ಮಹಾರಾಜ ಮಾತನಾಡಿ, ಮನುಷ್ಯ ಜನ್ಮ ಭೂಮಿಗೆ ಬರುವುದು ದುರ್ಲಭ. ಬಂದ ಬಳಿಕ ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಗುರುವಿನ ದರ್ಶನ, ಸ್ಪರ್ಶನ ಮತ್ತು ಸಮರ್ಪಣೆ ಮನೋಭಾವದಿಂದ ಮಾನವ ಕುಲದ ಏಳಿಗೆ ಆಗಲಿದೆ. ಗುರುಗಳು ಮತ್ತು ಶಿಷ್ಯರ ನಡುವೆ ಜನ್ಮಜನ್ಮಾಂತರದ ಋಣಾನುಬಂಧವಿರುತ್ತದೆ ಎಂದು ವಿವರಿಸಿದರು.

ರವೀಂದ್ರನಾಥ ಮಹಾರಾಜ ಮಾತನಾಡಿ, ಸತ್ಸಂಗ, ಸತ್ಕಾರ್ಯಗಳಿಂದ ಮಾನವ ಜನ್ಮದಿಂದ ಮುಕ್ತಿ ಹೊಂದಬೇಕು. ಪರಮಾತ್ಮನನೊಂದಿಗೆ ಲೀನವಾಗಬೇಕು. ಪ್ರತಿಯೊಂದು ಜೀವಿ ಬಯಸುವುದೇ ಇದನ್ನು. ಇಂಥ ಮುಕ್ತಿಗಾಗಿ ಪ್ರತಿಯೊಬ್ಬರೂ ಹಾತೊರೆಯಬೇಕು ಎಂದರು.

ಗುರುಮತೆ ವಿಜಯಾ ಬದ್ದಿ ಮಾತನಾಡಿ, ಜೀವನದಲ್ಲಿ ಬ್ರಹ್ಮಪದದ ಅರ್ಥ ತಿಳಿದುಕೊಂಡುಬಿಟ್ಟರೆ ಮತ್ತೇನನ್ನೂ ಪಡೆಯಲು ಮನುಷ್ಯ ಬಯಸುವುದಿಲ್ಲ. ಅಂಥ ದಿವ್ಯಾನುಸಂಧಾನ ಅದು. ಸತತ ಅಧ್ಯಯನ, ಗುರುಸೇವೆಯಿಂದ ಜೀವನಕ್ಕೆ ಮುಕ್ತಿ ಸಾರುವ ಸಂದೇಶ ನಮ್ಮ ದೇಶದ ತತ್ವ, ಸಿದ್ಧಾಂತಗಳಲ್ಲಿ ಅಡಗಿದೆ ಎಂದರು.

ರುದ್ರಗೌಡ ಶರಣರು, ಡಿ.ಸಿ. ಬಾಕಳೆ, ಗೊಂಗಾಣೆ ಶರಣರು, ಪ್ರಕಾಶ ಮಹಾರಾಜರು ಮಾತನಾಡಿ, ಗುರುವಿನಿಂದ ಸಕಲ ಸಂಪದ ಲಭ್ಯವಾಗಲಿದೆ. ಲೌಕಿಕದೊಳಿದ್ದೂ ಪಾರಮಾರ್ಥ ಗೆಲ್ಲಬೇಕೆಂಬ ಸಂದೇಶವನ್ನು ಗಣಪತರಾವ್ ಮಹಾರಾಜರು ಸಾರಿದ್ದರು. ಅಂತೆಯೇ ಅವರ ದಿವ್ಯ ಸಂದೇಶ ನಮ್ಮೆಲ್ಲರಿಗೂ ದಾರಿದೀಪವಾಗಿದೆ ಎಂದರು.

ಗುರುಮಾತೆ ನಂದಾ ಲದ್ವಾ, ಪ್ರಮುಖರಾದ ಬಿ.ಜೆ. ಸಂಡೂರು, ಹನುಮಂತಸಾ ನಿರಂಜನ, ಪ್ರಕಾಶ ಚೌಧರಿ, ಗಜಾನನ ಹಬೀಬ, ಇತರರು ಉಪಸ್ಥಿತರಿದ್ದರು.

ಬಾಕ್ಸ್...

ಹರಿದ ಭಕ್ತಿ ಸುಧೆ

ಬೆಳಗ್ಗೆ ನಗರ ಸಂಕೀರ್ತನೆ ನಡೆಯಿತು. ಬಹಳಷ್ಟು ಜನ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಭಾಗವಹಿಸಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ವಿಶೇಷಿತರನ್ನು ಗುರುತಿಸಿ ಸನ್ಮಾನಿಸಲಾಯಿತು. ಗುರು ಶ್ರೀ ಗಣಪತರಾವ್ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ, ಪಾದುಕೆ ಪೂಜೆ ಅದ್ದೂರಿಯಿಂದ ನಡೆಯಿತು. ಭಕ್ತರು ಅನುಭವ ಪದ ಹಾಗೂ ಭಜನೆ ಪದಗಳನ್ನು ಹಾಡಿ ಭಕ್ತಿ ಸುಧೆ ಹರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net