ಪಾರಂಪರಿಕ ತಾಣಗಳ ಉಳಿವು ಎಲ್ಲರ ಜವಾಬ್ದಾರಿ : ಇತಿಹಾಸ ತಜ್ಞ ಡಾ. ಶೆಲ್ವಪಿಳ್ಳೆ ಅಯ್ಯಂಗಾರ್

heritage week
Published on

ಮೈಸೂರು: ಯುನೆಸ್ಕೋ ನಮ್ಮ ದೇಶದಲ್ಲಿ 40 ವಿಶ್ವ ಪಾರಂಪರಿಕ ತಾಣಗಳನ್ನು ಗುರುತಿಸಿದ್ದು, ಭಾರತವನ್ನೇ ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸುವಷ್ಟು ತಾಣಗಳು ನಮ್ಮಲ್ಲಿ ಇವೆ. ಈ ಎಲ್ಲ ಪಾರಂಪರಿಕ ತಾಣಗಳನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಇತಿಹಾಸ ತಜ್ಞ ಡಾ. ಶೆಲ್ವಪಿಳ್ಳೆ ಅಯ್ಯಂಗಾರ್ ಹೇಳಿದರು.

ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಪಾರಂಪರಿಕ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾಕಿಸ್ತಾನ, ಅಫ್ಗಾನಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ ದಕ್ಷಿಣಾ ಏಷ್ಯದಲ್ಲಿ ಸಾವಿರಾರು ಪಾರಂಪರಿಕ ತಾಣಗಳಿದ್ದು, ಅವುಗಳ ಐತಿಹಾಸಿಕ ಮಹತ್ವವನ್ನು ಯಾರೂ ಮರೆಯಬಾರದು ಎಂದರು.

ಐತಿಹಾಸಿಕ ಹಿನ್ನೆಲೆ ಹೊಂದಿರುವ ದೇಗುಲ, ಮಸೀದಿ, ಚರ್ಚ್ ಸೇರಿದಂತೆ ಯಾವುದೇ ಸ್ಮಾರಕಗಳು ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ, ಅದು ಎಲ್ಲರಿಗೂ ಸೇರಿದ ಆಸ್ತಿ. ಶ್ರೀರಂಗಪಟ್ಟಣದ ದರಿಯಾದೌಲತ್, ನಗರದ ಸೇಂಟ್ ಫಿಲೋಮಿನಾ ಚರ್ಚ್, ಹಳೇಬೇಡಿನ ಹೊಯ್ಸಳೇಶ್ವರ ದೇವಾಲಯ ಸೇರಿದಂತೆ ವಿವಿಧ ಸ್ಮಾರಕಗಳು ನಮ್ಮೆಲ್ಲರ ಆಸ್ತಿ. ಅವುಗಳನ್ನು ಯಾರಾದರು ಹಾಳು ಮಾಡಲು ಯತ್ನಿಸಿದರೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಮಾನಸಗಂಗೋತ್ರಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ವಿ.ಶೋಭಾ, ಇತಿಹಾಸ ತಜ್ಞರಾದ ಡಾ.ಎನ್.ಎಸ್.ರಂಗರಾಜು, ಡಾ.ಎಚ್.ಎಂ. ಸಿದ್ದನಗೌಡರ್, ಇಲಾಖೆಯ ಉಪನಿರ್ದೇಕ ಸಿ.ಎನ್.ಮಂಜುಳಾ, ಎಂಜಿನಿಯರ್ ಸಿ.ಟಿ.ಮಹೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net