

ಮೂಡಿಗೆರೆ: ಕರ್ನಾಟಕ ಜಾನಪದ ಪರಿಷತ್ ವಿಶ್ವ ಸಂಸ್ಥೆಯ ಯುನೆಸ್ಕೋ ವಿಭಾಗದ ಸಾಂಸ್ಕೃತಿಕ ತಾಣಗಳಲ್ಲಿ 56ನೇ ಸ್ಥಾನ ಪಡೆದು ವಿಶ್ವಸಂಸ್ಥೆಯ ಮಾನ್ಯತೆ ಪಡೆದಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ತಾಪಂನ ದೀನದಯಾಳ್ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಜಾನಪದ ಪರಿಷತ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 30 ವರ್ಷಗಳ ಹಿಂದೆ ರಾಮನಗರದಲ್ಲಿ 15 ಎಕರೆ ವಿಸ್ತೀರ್ಣದಲ್ಲಿ ಜಾನಪದ ಸಾಹಿತ್ಯ ಸಂಸ್ಕೃತಿ ಬಿಂಬಿಸುವ ಜಾನಪದಲೋಕ ಎಂಬ ಮ್ಯೂಸಿಯಂ ಸ್ಥಾಪಿಸಿ ಪ್ರವಾಸಿಗರಿಗೆ ಜಾನಪದದ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಚಿಕ್ಕಮಗಳೂರು ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಜಾನಪದ ಪರಿಷತ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಹಳೆಬೇರು ಹೊಸ ಚಿಗುರು ಕೂಡಿರಲು ಮರಸೊಬಗು ಎನ್ನುವಂತೆ ಭಾರತೀಯ ಸಂಸ್ಕೃತಿ ಉಳಿದು ಬೆಳೆಯಲು ಜಾನಪದ ಸಂಸ್ಕೃತಿ ಮುಖ್ಯವಾಗಿದೆ. ಎಲ್ಲ ಧರ್ಮ, ಸಂಸ್ಕೃತಿ ಸಾಹಿತ್ಯದ ತಳಪಾಯ ಜಾನಪದವಾಗಿದೆ. ಇದನ್ನು ಸಂರಕ್ಷಿಸಲು ರಾಜ್ಯಾಂದ್ಯಂತ ಕರ್ನಾಟಕ ಜಾನಪದ ಪರಿಷತ್ ಸಕ್ರಿಯವಾಗಿದೆ ಎಂದು ತಿಳಿಸಿದರು.
ಮೂಡಿಗೆರೆ ತಾಲೂಕು ಜಾನಪದ ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯಿತು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಬಿ.ಎಸ್.ಜಯರಾಂ, ಜಾನಪದ ಕಲಾ ಪರಿಷತ್ ಗೌರವಾಧ್ಯಕ್ಷ ಸುಬ್ರಹ್ಮಣ್ಯ, ಚಂದ್ರೇಗೌಡ, ತಾಲೂಕು ನೌಕರ ಸಂಘದ ಅಧ್ಯಕ್ಷ ನವೀನ್, ಸಾಹಿತಿ ಎಂ.ಎಸ್.ನಾಗರಾಜ್, ಬಕ್ಕಿ ರವಿ, ಲಕ್ಷ್ಮಣಗೌಡ, ಬಿ.ಆರ್.ಬಾಲಕೃಷ್ಣ, ಹೆಚ್.ಜಿ.ಸುರಂದ್ರ ಮತ್ತಿತರರಿದ್ದರು.