

ಕುಂದಾಪುರ: ಸಂಸ್ಕಾರ ಹಾಗೂ ಸಂಸ್ಕೃತಿಯ ಅರಿವು ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ನಮ್ಮ ಮಕ್ಕಳಿಗೆ ಯೋಗ್ಯ ಶಿಕ್ಷಣ ನೀಡಬೇಕು ಎಂದು ಕರಾವಳಿ ಪೊಲೀಸ್ ಪಡೆ ನಿರೀಕ್ಷಕ ಪ್ರಮೋದ್ಕುಮಾರ ಹೇಳಿದರು.
ಪಡುಕೇರಿ ಒಂಬತ್ತುದಂಡಿಗೆ ಚಿಕ್ಕಮ್ಮ ದೇವಸ್ಥಾನದಲ್ಲಿ ಯುವ ಮಿತ್ರವೃಂದದ 30ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಗೃಹರಕ್ಷಕ ದಳದ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ. ಮಾತನಾಡಿ, ಅಧಿಕಾರ, ಅಂತಸ್ತು ಏರಿಕೆಯಾದಾಗ ನಮ್ಮ ಬೆಳವಣಿಗೆಯ ಹಿಂದಿನ ಹೆಜ್ಜೆಗಳನ್ನು ಮರೆಯಬಾರದು. ಆಧುನಿಕತೆಯ ಉಪಯೋಗವನ್ನು ಮಾತ್ರ ಪಡೆದುಕೊಂಡು ಅಪಾಯದಿಂದ ದೂರವಿರಬೇಕು ಎಂದರು.
ಶ್ರೀ ಚಿಕ್ಕಮ್ಮ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ್ ಕಾಮಧೇನು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ದಿನೇಶ್ ಕುಂದಾಪುರ, ಶ್ರೀ ಚಿಕ್ಕಮ್ಮ ದೇವಸ್ಥಾನ ಮಹಿಳಾ ಮಂಡಳಿ ಅಧ್ಯಕ್ಷೆ ಪ್ರಭಾವತಿ ಕೇಶವ, ಯುವ ಮಿತ್ರವೃಂದ ಗೌರವಾಧ್ಯಕ್ಷ ನಾಗರಾಜ್ ಕೆಳಮನೆ, ಕಾರ್ಯದರ್ಶಿ ಮಹೇಶ್ ನಾಯ್ಕ ಉಪಸ್ಥಿತರಿದ್ದರು. ಯುವಮಿತ್ರ ವೃಂದ ಅಧ್ಯಕ್ಷ ಅಮರ್ ಕುಮಾರ್ ಪ್ರಸ್ತಾವನೆಗೈದರು. ಸಂಪತ್ ಕೆಳಮನೆ ವಂದಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ ಮನಮೋಹನ್ ಕಾರ್ಯಕ್ರಮ ನಿರೂಪಿಸಿದರು.
ಸಮಾಜಸೇವೆಗಾಗಿ ಸುರೇಂದ್ರ (ಸೂರಿ) ಅವರಿಗೆ ಯುವ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ವಾಲಿಬಾಲ್ ಆಟಗಾರ ಸೂರಜ್ಕುಮಾರ ಅವರನ್ನು ಸನ್ಮಾನಿಸಲಾಯಿತು.