

ಕುಶಾಲನಗರ: ಕನ್ನಡ ಭಾಷೆಗೆ ತನ್ನದೇ ಆದ ಸಾಂಸ್ಕೃತಿಕ ಇತಿಹಾಸವಿದ್ದು, ಇಂತಹ ಭಾಷೆಯ ಉಳಿವು, ಬೆಳವಣಿಗೆ ಮತ್ತು ಪ್ರಸರಣ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ.ಸಂ.ಆಲೂರ ಅಭಿಪ್ರಾಯಪಟ್ಟರು.
ಭಾರತೀಯ ಭಾಷಾ ಉತ್ಸವ ಪ್ರಯುಕ್ತ ಶಾಸೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ, ಉನ್ನತ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವಾಲಯ, ಮೈಸೂರಿನ ಮಾನಸಗಂಗೋತ್ರಿ, ಕೊಡಗು ವಿಶ್ವವಿದ್ಯಾಲಯ, ಕೊಡಗು ಜ್ಞಾನಕಾವೇರಿ ಕ್ಯಾಂಪಸ್‌ನ ಸಹಯೋಗದಲ್ಲಿ ಶುಕ್ರವಾರ ಚಿಕ್ಕ ಅಳುವಾರದಲ್ಲಿರುವ ಕೊಡಗು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ ವಿಚಾರ ಬಂದಾಗ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಬಾರದು. ಹೆಮ್ಮೆಯಿಂದ ಕನ್ನಡಿಗರು ಎಂದು ಹೇಳಿಕೊಳ್ಳುವ ನಾವುಗಳು ರಾಜ್ಯೋತ್ಸವಕ್ಕೆ ಮಾತ್ರ ಸೀಮಿತವಾಗದೆ ನಿತ್ಯ ಕನ್ನಡ ಭಾಷೆಯನ್ನು ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕನ್ನಡದ ಜತೆಗೆ ಇತರ ಭಾಷೆಗಳನ್ನೂ ಕಲಿಯುವ ಮೂಲಕ ಕನ್ನಡದ ಸಿರಿವಂತಿಕೆಯನ್ನು ಹೆಚ್ಚಿಸಬೇಕು ಎಂದು ನುಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹಾಸನದ ಎ.ವಿ.ಕೆ.ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಿ.ಚ.ಯತೀಶ್ವರ್ ಮಾತನಾಡಿ, ಭಾಷೆ ಇಲ್ಲದಿದ್ದರೆ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಸಾಧ್ಯವಿಲ್ಲ. ಅಂಧಕಾರದ ಜಗತ್ತಿನಲ್ಲಿ ಭಾಷೆ ಜ್ಯೋತಿ ಸ್ವರೂಪ. ಜ್ಞಾನ ಭಂಡಾರದ ವಿಕಾಸಕ್ಕೆ ಭಾಷೆ ಪೂರಕವಾಗಿದ್ದು, ಭರತ ಖಂಡದಲ್ಲಿ ಹೆಚ್ಚು ಭಾಷೆಗಳು ಬಳಕೆಯಲ್ಲಿವೆ ಎಂದರು.
ಭಾರತದ ಸಂವಿಧಾನದಲ್ಲಿ ದೇಶದ 22 ಭಾಷೆಗಳನ್ನು ಅಧಿಕೃತ ರಾಷ್ಟ್ರಭಾಷೆಗಳನ್ನಾಗಿ ಬಳಕೆ ಮಾಡಲಾಗುತ್ತಿದೆ. ಒಂದೊಂದು ಪ್ರದೇಶಕ್ಕೂ ಒಂದೊಂದು ಭಾಷೆ ಮತ್ತು ಉಪಭಾಷೆ ಬಳಕೆಯಲ್ಲಿದೆ. ಸಂಸ್ಕೃತ ಎಲ್ಲ ಭಾಷೆ ಮೇಲೆ ಪ್ರಭಾವ ಬೀರಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಡಾ.ಸೀನಪ್ಪ ಮಾತನಾಡಿ, ಒಂದು ಭಾಷೆ ಮನುಷ್ಯನ ಸಂಬಂಧ ಬೆಸೆಯವಂತಹ ಕೆಲಸ ಮಾಡುತ್ತದೆ. ಭಾರತೀಯ ಭಾಷೆ ಮತ್ತು ಸಾಹಿತ್ಯ ಬಹು ವಿಶಿಷ್ಟತೆಯಿಂದ ಕೂಡಿದ್ದು, ಅದರಲ್ಲೂ ಕನ್ನಡ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಅತ್ಯಂತ ಶ್ರೇಷ್ಠ ಭಾಷೆಯಾಗಿದೆ ಎಂದು ಹೇಳಿದರು.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಅಸೋಸಿಯೇಟ್ ಫೆಲೋ ಡಾ.ರಕ್ಷಿತ್, ವಿವಿಧ ವಿಭಾಗದ ಉಪನ್ಯಾಸಕರು, ಆಡಳಿತ ವರ್ಗ, ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.