'ತಾಂತ್ರಿಕತೆಯನ್ನು ಅಳವಡಿಸಿಕೊಂಡು ಸಮೀಕ್ಷೆ ಮಾಡಿ '

20
Published on

ಮೈಸೂರು: ಸಂಶೋಧಕರು ಹಾಡಿ ಜನರ ಬಗ್ಗೆ ಅಧ್ಯಯನ ಮಾಡುವಾಗ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಸಮೀಕ್ಷೆ ಮಾಡಬೇಕು ಎಂದು ಪರಿಶಿಷ್ಠವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಿ. ರಂದೀಪ್ ಹೇಳಿದರು.

ನಗರದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಧ್ಯಯನ ಮಾಡುತ್ತಿರುವವರು ನಿಗಧಿತ ಕಾಲಮಿತಿಯೊಳಗೆ ತಮ್ಮ ಕಾರ್ಯ ಪೂರ್ಣಗೊಳಿಸುವುದರೊಂದಿಗೆ ಸಮಗ್ರ ವರದಿಯ ಜೊತೆಗೆ ಸಂಕ್ಷಿಪ್ತ ವರದಿಯ ಮುಖ್ಯಾಂಶಗಳನ್ನು ನೀಡಬೇಕು ಎಂದರು.

ಯಾವುದೇ ಬುಡಕಟ್ಟು ಸಮುದಾಯ ಅಧ್ಯಯನದಲ್ಲಿ ಆ ಜನರ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡುವಾಗ ಬೇರೆ ಪಂಗಡಗಳನ್ನು ಹೋಲಿಕೆ ಮಾಡಿ ಅಧ್ಯಯನ ಮಾಡಬೇಕು. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಕಾರ್ಯಪ್ರವತ್ತರಾಗುವುದರೊಂದಿಗೆ ಹೊಸ ಹೊಸ ಯೋಜನೆಗಳನ್ನು ಸಂಶೋಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಬುಡಕಟ್ಟು ಜನರ ಪರಿಕರಗಳ ಸಂರಕ್ಷಣೆ ಮಾಡಿ ಮ್ಯೂಸಿಯಂನಲ್ಲಿಡಲು ರೂಪುರೇಶೆಗಳ ಸಮಗ್ರ ವರದಿ ಕ್ರಿಯಾ ಯೋಜನೆ ರೂಪಿಸಬೇಕು ಹಾಗೂ ಬುಡಕಟ್ಟು ಜನರ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಬುಡಕಟ್ಟು ಉತ್ಸವಗಳನ್ನು ಆಯೋಜನೆ ಮಾಡಲು ಚಿಂತನೆ ನಡೆಸಲಾಗುವುದು ಎಂದರು.

ರಾಜ್ಯ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಟಿ.ಯೋಗೀಶ್, ಉಪ ನಿರ್ದೇಶಕಿಯಾದ ಬಿ.ಎಸ್. ಪ್ರಭಾಅರಸ್, ಸಂಶೋಧನಾಧಿಕಾರಿ ಕೆ.ಶ್ರೀನಿವಾಸ್, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿ.ಶಿವಕುಮಾರ್, ತಜ್ಞರಾದ ಡಾ. ಮೋಹನ್, ಡಾ. ಮಂಜುನಾಥ್, ಡಾ. ಕಲಾವತಿ, ಡಾ. ಕೃಷ್ಣಮೂರ್ತಿ, ಕಚೇರಿ ಅಧೀಕ್ಷಕ ಗುಣಧರ್, ವೈ.ಪಿ. ಹೇಮಚಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net