ಪ್ರಧಾನಮಂತ್ರಿ ಆವಾಸ್ ಯೋಜನೆ: ವಸತಿ ಸೌಲಭ್ಯ ಕಲ್ಪಿಸಲು ಸಮೀಕ್ಷೆ

Housing project
Published on

ಮಂಡ್ಯ: ಪ್ರಧಾನಮಂತ್ರಿ ಆವಾಸ್ ಯೋಜನೆ(ಗ್ರಾಮೀಣ)ಯಡಿ ಅರ್ಹರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಯೋಜನೆಯ ಅವಧಿಯನ್ನು 2024-25 ರಿಂದ 2028-29ರವರೆಗೆ ವಿಸ್ತರಿಸಲಾಗಿದ್ದು, ಗ್ರಾಮ ಪಂಚಾಯಿತಿ ವತಿಯಿಂದ 2018ರ ಸಮೀಕ್ಷಾ ಪಟ್ಟಿಗೆ ಹೆಚ್ಚುವರಿಯಾಗಿ ವಸತಿ ರಹಿತರ ಸಮೀಕ್ಷೆಯನ್ನು ಮಾ.31ರೊಳಗೆ ನಡೆಸಲು ಸರ್ಕಾರದಿಂದ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ತಿಳಿಸಿದ್ದಾರೆ.

ಅದರಂತೆ, ಜಿಲ್ಲೆಯ 233 ಗ್ರಾಪಂನಲ್ಲಿ ವಸತಿ ರಹಿತರ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಸಿಬ್ಬಂದಿ ನಿಯೋಜಿಸಲಾಗಿದೆ. ಇವರು ಗ್ರಾಪಂ ವ್ಯಾಪ್ತಿಯ ಎಲ್ಲ ಅರ್ಹ ವಸತಿ ರಹಿತರ ಕುಟುಂಬದ ಮನೆ ಮನೆಗೆ ಭೇಟಿ ನೀಡಿ ತಂತ್ರಾಂಶದ ಮೂಲಕ ಸಮೀಕ್ಷೆ ನಡೆಸಲಿದ್ದಾರೆ. ಅರ್ಹ ವಸತಿ ರಹಿತರು ಸಮೀಕ್ಷೆ ಸಂದರ್ಭದಲ್ಲಿ ಕಡ್ಡಾಯವಾಗಿ ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ಕುಟುಂಬ ಸದಸ್ಯರ ಆಧಾರ್ ಕಾರ್ಡ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ನರೇಗಾ ಜಾಬ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕ, ವಾಸಿಸುತ್ತಿರುವ ಮನೆ ಹಾಗೂ ಮನೆ ನಿರ್ಮಿಸಲು ಹೊಂದಿರುವ ನಿವೇಶನದ ಸ್ಥಳಗಳ ವಿವರವನ್ನು ಸಿಬ್ಬಂದಿಗೆ ನೀಡಬೇಕು.

ಮುಖ್ಯವಾಗಿ ವಸತಿ ಕೋರುವವರು ಕಡ್ಡಾಯವಾಗಿ ಮಹಿಳೆಯರಾಗಿದ್ದು,(ಹಿರಿಯ ನಾಗರಿಕ, ವಿಧುರ, ಅಂಗವಿಕಲ, ಮಾಜಿ ಸೈನಿಕರಾಗಿದ್ದಲ್ಲಿ ಪುರುಷ ಫಲಾನುಭವಿಯನ್ನು ಪರಿಗಣಿಸಬಹುದಾಗಿದೆ) ಕುಟುಂಬದ ಹೆಸರಿನಲ್ಲಿ ಯಾವುದೇ ಪಕ್ಕಾ ಮನೆ ಹೊಂದಿರಬಾರದು. ಬಿಪಿಎಲ್ ಪಡಿತರ ಚೀಟಿ ಹೊಂದಿರಲೇಬೇಕು. ವಸತಿ ರಹಿತರು ಆವಾಸ್ ಪ್ಲಸ್ ತಂತ್ರಾಂಶದ ಮೂಲಕ ಸ್ವಯಂ ಸಮೀಕ್ಷಾ ಕಾರ್ಯ ಕೈಗೊಳ್ಳಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಬಂಧಪಟ್ಟ ಗ್ರಾಪಂನಿಂದ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net