ಚಿಕ್ಕವಯಸ್ಸಿನಲ್ಲೇ ಹೃದಯಾಘಾತ ವರದಿ ಸಿದ್ಧಪಡಿಸಲು ಸಮೀಕ್ಷೆ : ಜಯದೇವ ಹೃದ್ರೋಗ ಆಸ್ಪತ್ರೆ ಅಧೀಕ್ಷಕ ಡಾ.ಕೆ.ಎಸ್.ಸದಾನಂದ

Published on

ಮೈಸೂರು: ಚಿಕ್ಕವಯಸ್ಸಿನಲ್ಲಿಯೇ ಆಗುತ್ತಿರುವ ಹೃದಯಾಘಾತಗಳ ಕುರಿತು ವರದಿ ಸಿದ್ಧಪಡಿಸಲು ಸಮೀಕ್ಷೆ ನಡೆಸಲಾಗುವುದು ಎಂದು ಜಯದೇವ ಹೃದ್ರೋಗ ಆಸ್ಪತ್ರೆ ಅಧೀಕ್ಷಕ ಡಾ.ಕೆ.ಎಸ್.ಸದಾನಂದ ಹೇಳಿದರು.

ಮೈಸೂರು ಪತ್ರಕರ್ತರು ಹಾಗೂ ಅವರ ಕುಟುಂಬಸ್ಥರಿಗೆ ಜಯದೇವ ಹೃದ್ರೋಗ ಆಸ್ಪತ್ರೆಯಿಂದ ಬುಧವಾರ ಆಯೋಜಿಸಿದ್ದ ಹೃದಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಚಿಕ್ಕವಯಸ್ಸಿನವರಲ್ಲೇ ಹೃದಯಾಘಾತ ಹೆಚ್ಚುತ್ತಿದೆ. ನಿತ್ಯ 3-4 ಜನರಿಗೆ ಅಂಜಿಯೋಗ್ರಾಂ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕೆ ಕಾರಣ ಏನೆಂದು ತಿಳಿಯಬೇಕಿದೆ. ಹೃದಯಾಘಾತಕ್ಕೆ ಕೋವಿಡ್ ಬಂದಿರುವುದಾ, ಬದಲಾದ ಜೀವನ ಶೈಲಿಯಾ ಅಥವಾ ಹೆಚ್ಚು ಶುಗರ್ ಇರುವುದಾ ಎಂದು ತಿಳಿದುಕೊಳ್ಳುವ ಅಗತ್ಯ ಇದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಈಗಾಗಲೇ ಸರ್ವೇ ಕಾರ್ಯ ನಡೆಯುತ್ತಿದೆ ಎಂದರು.

ಮೈಸೂರಿನಲ್ಲಿಯೂ ನಾವು ವೈದ್ಯರ ಅಸೋಸಿಯೇಷನ್‌ನಿಂದ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲು ಹೃದಯಾಘಾತಕ್ಕೆ ಒಳಗಾದ 40 ವರ್ಷದೊಳಗಿನವರ ಚಿಕಿತ್ಸೆ, ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಮುಂದಿನ ತಿಂಗಳಲ್ಲಿ ಹೃದಯಾಘಾತಕ್ಕೆ ನಿಖರ ಕಾರಣ ಪತ್ತೆಯ ವರದಿ ತಯಾರಿಸಲು ಪ್ರಾರಂಭಿಸಲಿದ್ದು, ಒಂದು ವರ್ಷದಲ್ಲೇ ವರದಿ ತಯಾರಿಸಿ ಸೂಕ್ತ ಚಿಕಿತ್ಸೆ ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಹೃದಯಾಘಾತ ಎನ್ನುವುದು ಕೊನೇ ಕ್ಷಣದವರೆವಿಗೂ ತಿಳಿಯುವುದಿಲ್ಲ. ಏಕಾಏಕಿ ಸಂಭವಿಸಿದಾಗ ಆಗುವ ಹಾನಿ ತಪ್ಪಿಸಲು ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಅದಕ್ಕಾಗಿ ಜಯದೇವ ಆಸ್ಪತ್ರೆಯಿಂದಲೂ ಜನರಿಗೆ ಉಪಯೋಗವಾಗುವ ದೃಷ್ಟಿಯಿಂದ ಉಚಿತ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.

ಆಸ್ಪತ್ರೆ ವೈದ್ಯರಾದ ಡಾ.ಶಾಂಭವಿ, ಡಾ.ಪ್ರಭುಚಂದ್ರ, ನರ್ಸಿಂಗ್ ಸೂಪರಿಂಟೆಂಡೆಂಟ್ ಯೋಗಾನಂದ, ಪಿಆರ್‌ಒ ಪ್ರಿಯಾ, ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ, ಹಿರಿಯ ಪತ್ರಕರ್ತರಾದ ಕೂಡ್ಲಿ ಗುರುರಾಜ್, ಎಸ್.ಟಿ.ರವಿಕುಮಾರ್, ಪತ್ರಕರ್ತರಾದ ಸಿ.ಎಂ.ಕಿರಣ್‌ಕುಮಾರ್, ಎಂ.ಸುಬ್ರಹ್ಮಣ್ಯ, ಬಿ.ರಾಘವೇಂದ್ರ, ನೇರಳೆ ಬಸವರಾಜು, ವಿತರಕರ ಸಂಘದ ಅಧ್ಯಕ್ಷ ಸುಂದರ್, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಅಧಿಕೃತ ಏಜೆಂಟರ ಸಂಘದ ಶಾಂತೇಶ್ ಇತರರು ಇದ್ದರು. ಶಿಬಿರದಲ್ಲಿ 160ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net