ಸೆ.22ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

Survey preliminary meeting on social and educational conditions Mandya
Published on

ಮಂಡ್ಯ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಿಲ್ಲೆಯಲ್ಲಿ ಸೆ.22ರಿಂದ ಅ.7ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿಜಿಟಲ್ ವಿಧಾನದಲ್ಲಿ ಜನರ ಹಾಗೂ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸಲಾಗುವುದು. ಸಮೀಕ್ಷೆಯು ಜನರ ಸ್ಥಿತಿಗತಿ ತಿಳಿದುಕೊಂಡು ವಿವಿಧ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ರೂಪಿಸಲು ಸಹಾಯಕವಾಗಿರುತ್ತದೆ. ಸಾರ್ವಜನಿಕರು ಸಮೀಕ್ಷೆಯ ಸಂದರ್ಭದಲ್ಲಿ ನಿಖರ ಮಾಹಿತಿ ನೀಡುವುದರೊಂದಿಗೆ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.

ಮೊದಲ ಹಂತದಲ್ಲಿ ಸಮೀಕ್ಷೆಗೆ ಸಂಬಂಧಿಸಿದ ಪೂರ್ವಭಾವಿ ಕೆಲಸಗಳಾಗಿರುವ ಮನೆ ಪಟ್ಟಿ ಮತ್ತು ಅವುಗಳ ನಕ್ಷೆ(ಮ್ಯಾಪಿಂಗ್) ಸಿದ್ಧಪಡಿಸುವ ಕಾರ್ಯ ಪ್ರಾರಂಭವಾಗುತ್ತಿದೆ. ಜಿಲ್ಲೆಯ ಜನರು ವಾಸಿಸುವ ಮನೆಗಳಿಗೆ ವಿದ್ಯುತ್ ಸಂಪರ್ಕವಿರುವುದರಿಂದ ಆರ್.ಆರ್ ಮೀಟರ್ ಆಧಾರದ ಮೇಲೆ ಮನೆ ಗುರುತಿಸಿ ಸಮೀಕ್ಷೆ ಮಾಡಲಾಗುವುದು. ಇದರಿಂದ ಯಾವುದೇ ಮನೆ ಸಮೀಕ್ಷೆಯಿಂದ ವಂಚಿತವಾಗುವುದಿಲ್ಲ. ಈ ಹಿನ್ನಲೆಯಲ್ಲಿ ವಿದ್ಯುತ್ ಮೀಟರ್ ರೀಡರ್‌ಗಳ ಮೂಲಕ ಎಲ್ಲ ಮನೆಗಳ ಜಿಯೋ ಟ್ಯಾಗಿಂಗ್ ಮಾಡಲಾಗುವುದು ಎಂದರು.

ಇಂಧನ ಇಲಾಖೆಯ ಸಹಕಾರದೊಂದಿಗೆ ಮೀಟರ್ ರೀಡರ್ ಮೂಲಕ ಮನೆಗಳ ಪಟ್ಟಿ ಮಾಡಲಾಗುತ್ತದೆ. ನಂತರ ಸರ್ವೇಯನ್ನು ಕೈಗೆತ್ತಿಕೊಳ್ಳಲಾಗುವುದು. ಪಟ್ಟಿ ತಯಾರಿಸುವಾಗ ಯಾವುದೇ ಮನೆಗಳು ಬಿಟ್ಟು ಹೋಗದಂತೆ ಎಚ್ಚರಿಗೆ ವಹಿಸಬೇಕು. ಎರಡನೇ ಹಂತದಲ್ಲಿ ಸಮೀಕ್ಷೆ ಕಾರ್ಯವನ್ನು ದಸರಾ ರಜೆಯ ಅವಧಿಯಲ್ಲಿ ಸೆ.22 ರಿಂದ ಅ.7ರವರೆಗೆ ನಡೆಸಲಾಗುವುದು. ಈ ಸಮಯದಲ್ಲಿ ಶಾಲಾ ರಜಾದಿನಗಳು ಇರುವುದರಿಂದ ಸಮೀಕ್ಷೆ ಕಾರ್ಯಕ್ಕೆ ಪೂರಕವಾಗಿರುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಂಜುಳಾ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net