ಪ್ರತಿ ಮನೆಗೆ ತಲುಪಲಿದೆ ಪ್ರಶ್ನಾವಳಿ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

Survey pre meeting Mandya
Published on

ಮಂಡ್ಯ: ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಿಲ್ಲೆಯಲ್ಲಿ ಸೆ.22ರಿಂದ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆಗೆ ಸಂಬಂಧಿಸಿದಂತೆ ಪ್ರಶ್ನಾವಳಿಗಳ ಪಟ್ಟಿಯನ್ನು ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ತಲುಪಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೆ.13 ರಿಂದ 19ರವರೆಗೆ ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಪ್ರಶ್ನಾವಳಿ ತಲುಪಿಸಲಿದ್ದಾರೆ. ಸಾರ್ವಜನಿಕರು ಇದನ್ನು ಪಡೆದುಕೊಂಡು ಉತ್ತರ ಸಿದ್ಧಪಡಿಸಿಕೊಂಡರೆ ಸಮೀಕ್ಷೆದಾರರು ಮನೆಗಳಿಗೆ ಭೇಟಿ ನೀಡಿದಾಗ ಕೆಲಸ ಸುಲಭವಾಗುತ್ತದೆ ಎಂದರು.

ತಹಸೀಲ್ದಾರ್ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರ ಸಭೆ ನಡೆಸಿ ಅವರಿಗೆ ನಿರ್ದೇಶನ ನೀಡಬೇಕು. ಈ ಕೆಲಸಕ್ಕಾಗಿ ಆಶಾ ಕಾರ್ಯಕರ್ತೆಯರಿಗೆ 2000 ರೂ ಗೌರವಧನ ನೀಡಲಾಗುವುದು. ಸಮೀಕ್ಷೆದಾರರು ಸೆ.21ರಿಂದ ಸಮೀಕ್ಷೆ ಪ್ರಾರಂಭಿಸಿದಾಗ ಪ್ರಶ್ನಾವಳಿ ತಲುಪಿರುವ ಬಗ್ಗೆ ಸಮೀಕ್ಷೆದಾರರು ಖಾತ್ರಿ ಪಡಿಸಿಕೊಳ್ಳಲಿದ್ದಾರೆ ಎಂದರು.

ಈಗಾಗಲೇ ರಾಜ್ಯಮಟ್ಟದಲ್ಲಿ ಜಿಲ್ಲೆಯ ಐವರಿಗೆ ಸಮೀಕ್ಷೆ ಕುರಿತಂತೆ ತರಬೇತಿ ನೀಡಲಾಗಿದೆ. ಇವರು ಜಿಲ್ಲೆಯಲ್ಲಿ ಆಯ್ಕೆ ಮಾಡಲಾಗಿರುವ 80 ಜನ ಮಾಸ್ಟರ್‌ಗೆ ತರಬೇತಿ ನೀಡಲಿದ್ದಾರೆ. ಬಳಿಕ 80 ಜನ ಮಾಸ್ಟರ್ ಟ್ರೈನರ್ಸ್ 3000 ಸಮೀಕ್ಷೆದಾರರಿಗೆ ತರಬೇತಿ ನೀಡಲಿದ್ದಾರೆ. ಸಮೀಕ್ಷೆ ಮಾಡಲು ಇ-ಕೆವೈಸಿ ಆಗಿರುವ ಆಧಾರ್ ಸಂಖ್ಯೆ ಅಗತ್ಯವಾಗಿದೆ. ಇ-ಕೆವೈಸಿ ಆಧಾರ್ ಸಂಖ್ಯೆ ಹೊಂದಿಲ್ಲದವರು ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಮಾಡಿಸಿಕೊಳ್ಳಬೇಕು. ಸಮೀಕ್ಷೆದಾರರಿಗೆ ಪ್ರತಿ ಮನೆಗೆ 100 ರೂನಂತೆ ಹಾಗೂ ಇದರೊಂದಿಗೆ 5000 ರೂ ಗೌರವಧನ ನೀಡಲಾಗುವುದು. ಸಮೀಕ್ಷೆದಾರರು ತರಬೇತಿ ವೇಳೆ ಸಂಶಯಗಳನ್ನು ಪರಿಹರಿಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಮಾಸ್ಟರ್ ಟ್ರೈನರ್ಸ್ ಹಾಗೂ ಸಮೀಕ್ಷೆದಾರರಿಗೆ ನೀಡಲಾಗುವ ತರಬೇತಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ತರಬೇತಿ ಪೂರ್ಣವಾದ ನಂತರ ಪ್ರಶ್ನೆ ಕೇಳಲಿದ್ದಾರೆ. ತರಬೇತಿ ಹಾಗೂ ತರಬೇತಿಗೆ ಮೊದಲು ನೀಡಲಾಗುವ ವಿಷಯಗಳ ಬಗ್ಗೆ ಮಾಹಿತಿ ಇರಲಿ ಎಂದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಂಜುಳಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಡಿಡಿಪಿಯು ಸಿ.ಚಲುವಯ್ಯ, ಡಿಡಿಪಿಐ ಲೋಕೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net